ಪುರಿ ದೇವಸ್ಥಾನ: ಶಸ್ತ್ರಾಸ್ತ್ರ, ಶೂ ಧರಿಸಿದ ಪೊಲೀಸರಿಗೆ ಪ್ರವೇಶವಿಲ್ಲ

0
478

ಪುರಿಯ ಇತಿಹಾಸ ಪ್ರಸಿದ್ಧ ಜಗನ್ನಾಥ ದೇವಾಲಯವನ್ನು ಪೊಲೀಸರು ಶೂ ಧರಿಸಿ, ಶಸ್ತ್ರಾಸ್ತ್ರ ಹಿಡಿದು ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಅಕ್ಟೋಬರ್ 10 ರ ಬುಧವಾರ ಹೇಳಿದೆ. ದೇವಸ್ಥಾನದಲ್ಲಿ ಅಕ್ಟೋಬರ್ 3ರಂದು ನಡೆದ ಹಿಂಸಾಚಾರವನ್ನು ಉಲ್ಲೇಖಿಸಿ ಕೋರ್ಟ್ ಈ ಸೂಚನೆ ನೀಡಿದೆ.

ನವದೆಹಲಿ: ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದೊಳಗೆ ಪೊಲೀಸರು ಶಸ್ತ್ರ, ಶೂ ಜತೆ ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಅಕ್ಟೋಬರ್ 10 ರ  ಬುಧವಾರ ಆದೇಶಿಸಿದೆ.ದೇವಸ್ಥಾನದಲ್ಲಿ ಅಕ್ಟೋಬರ್ 3ರಂದು ನಡೆದ ಹಿಂಸಾಚಾರವನ್ನು ಉಲ್ಲೇಖಿಸಿ ಕೋರ್ಟ್ ಈ ಸೂಚನೆ ನೀಡಿದೆ.

ದೇವರ ದರ್ಶನಕ್ಕಾಗಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಸರತಿಸಾಲು ಪದ್ಧತಿ ವಿರೋಧಿಸಿ ಭಕ್ತರು ಅಂದು ಪ್ರತಿಭಟನೆ ನಡೆಸಿದ್ದರು. ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಒಂಬತ್ತು ಪೊಲೀಸರು ಗಾಯಗೊಂಡಿದ್ದರು.

ಭಕ್ತರು ಸರದಿಯಲ್ಲೇ ಬರಬೇಕು ಎಂಬ ಸೂಚನೆ ವಿರೋಧಿಸಿ ಅ. 3 ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಪೊಲೀಸರು ಗನ್ ಹಿಡಿದು, ಶೂ ಹಾಕಿಕೊಂಡೇ ದೇವಾಲಯದ ಒಳಗೆ ಪ್ರವೇಶಿಸಿದ್ದರು ಎಂದು ಸಾಮಾಜಿಕ- ಸಾಂಸ್ಕೃತಿಕ ಸಂಘಟನೆಯೊಂದು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಜಗನ್ನಾಥ ದೇಗುಲದ ಒಳಗೆ ಹಿಂಸಾಚಾರ ನಡೆದಿಲ್ಲ. ಮುಖ್ಯ ಮಂದಿರದಿಂದ 500 ಮೀಟರ್ ಆಚೆ ಇರುವ ದೇವಾಲಯದ ಆಡಳಿತ ಕಚೇರಿಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು ಎಂದು ಒಡಿಶಾ ಸರ್ಕಾರ ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ ಅವರ ಪೀಠ ಮಹತ್ವದ ಆದೇಶ ನೀಡಿದೆ.