ಪಿಎನ್‌ಬಿ: ಐವರ ಬಂಧನ

0
15

ಈ ಮೂಲಕ, ಪ್ರಸ್ತುತ ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಬಂಧಿಸಿದಂತಾಗಿದೆ. ಮೂವರು ಅಧಿಕಾರಿಗಳನ್ನು ಕಳೆದ ವಾರ ಹಾಗೂ ಮತ್ತೆ ಮೂವರನ್ನು ಸೋಮವಾರ ಬಂಧಿಸಲಾಗಿತ್ತು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್‌ ಸ್ಟಾರ್‌ ವಜ್ರಾಭರಣ ಸಂಸ್ಥೆಯ ಹಣಕಾಸು ವಿಭಾಗದ ಅಧ್ಯಕ್ಷ ವಿಪುಲ್‌ ಅಂಬಾನಿ, ಅವರ ಚಿಕ್ಕಪ್ಪ ಮೇಹುಲ್‌ ಚೋಕ್ಸಿ ಸೇರಿದಂತೆ ಸಂಸ್ಥೆಯ ಐದು ಮಂದಿ ಅಧಿಕಾರಿಗಳನ್ನು ಮಂಗಳವಾರ ಬಂಧಿಸಲಾಗಿದೆ.

ಈ ಮೂಲಕ, ಪ್ರಸ್ತುತ ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಬಂಧಿಸಿದಂತಾಗಿದೆ. ಮೂವರು ಅಧಿಕಾರಿಗಳನ್ನು ಕಳೆದ ವಾರ ಹಾಗೂ ಮತ್ತೆ ಮೂವರನ್ನು ಸೋಮವಾರ  ಬಂಧಿಸಲಾಗಿತ್ತು. ಈ ಪೈಕಿ ಮೂವರು, ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್‌ ಮೋದಿ ಅವರ ಕಂಪನಿ ಜೊತೆ ಸಂಪರ್ಕ ಹೊಂದಿದ್ದು, ಮತ್ತೆ ಮೂವರು ಚೋಕ್ಸಿಯವರ ಗೀತಾಂಜಲಿ ಗ್ರೂಪ್‌ ಕಂಪನಿಗೆ ಸೇರಿದವರಾಗಿದ್ದಾರೆ.

ಗೀಜಾಂಜಲಿ ಗ್ರೂಪ್‌ನ ಹಣಕಾಸು ವಿಭಾಗದ ಮುಖ್ಯಸ್ಥ ಕಪಿಲ್‌ ಖಂಡೇಲ್‌ವಾಲ್‌ ಮತ್ತು ವ್ಯವಸ್ಥಾಪಕ ನಿತೀನ್‌ ಶಾಹಿ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.

ಹೊಸ ಪ್ರಕರಣ ದಾಖಲು: ಈ ಮಧ್ಯೆ, ನೀರವ್‌ ಮೋದಿ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆಯು ಕಪ್ಪು ಹಣ ನಿಗ್ರಹ ಕಾನೂನಿನ ಅಡಿ ಹೊಸ ಕೇಸನ್ನು ದಾಖಲು ಮಾಡಿದೆ. ಆದಾಯಕ್ಕಿಂತ ಅಧಿಕ ಹಣವನ್ನು ಸಂಗ್ರಹಿಸಿರುವ ಆರೋಪದ ಅಡಿ ಈ ಕೇಸು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತಾದ ಅರ್ಜಿಯ ವಿಚಾರಣೆಯನ್ನು ಮುಂಬೈ ವಿಶೇಷ ನ್ಯಾಯಾಲಯವು ಇದೇ 27ರಂದು ನಡೆಸಲಿದೆ.