ಪಿಎಂ ಕಿಸಾನ್ ಯೋಜನೆ; ಆಧಾರ್​ ಜೋಡಣೆ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

0
101

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ನಿಧಿ ಯೋಜನೆ ಖಾತೆಯನ್ನು ಆಧಾರ್​ ಜತೆಗೆ ಜೋಡಿಸಲು ನಿಗದಿಪಡಿಸಿದ್ದ ಗಡುವನ್ನು ನವೆಂಬರ್​ 30ರ ತನಕ ಕೇಂದ್ರ ಸರ್ಕಾರ ವಿಸ್ತರಿಸಿದೆ.

ಹೊಸದಿಲ್ಲಿ: ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ-ಕಿಸಾನ್‌)  ಯೋಜನೆಯ ನೆರವು ಪಡೆಯುವ ರೈತರು, ಆಧಾರ್‌ ಸಂಖ್ಯೆಗೆ ತಮ್ಮ ವಿವರಗಳನ್ನು ಜೋಡಣೆ ಮಾಡುವ ಗಡುವನ್ನು 2019 ರ ನವೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ. ಆಧಾರ್‌ ಜೋಡಣೆ ಮಾಡಿಸದ ಲಕ್ಷಾಂತರ ರೈತರಿಗೆ ಸರಕಾರದ ತೀರ್ಮಾನದಿಂದ ತುಸು ಸಮಾಧಾನವಾಗಿದೆ.
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಅಕ್ಟೋಬರ್ 9 ರ ಬುಧವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
 
ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌, ”ಆಧಾರ್‌ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ್‌ ಜೋಡಣೆ ಮಾಡದ ರೈತರಿಗೆ 2019ರ ಆಗಸ್ಟ್‌ 1ರ ಬಳಿಕ ಸಹಾಯ ಧನ ಸ್ಥಗಿತಗೊಳಿಸುವುದಾಗಿ ಸೂಚಿಸಲಾಗಿತ್ತು. ಆದರೆ, ಇದೀಗ ಗಡುವನ್ನು ವಿಸ್ತರಿಸಲಾಗಿದೆ,” ಎಂದಿದ್ದಾರೆ. ಚಳಿಗಾಲದ ಬೆಳೆ ಬಿತ್ತನೆಗೆ ಮುಂದಾಗಿರುವ ರೈತರಿಗೆ ಸರಕಾರದ ಸಹಾಯ ಧನ ನೆರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
 
ಪಿಎಂ-ಕಿಸಾನ್‌ ಯೋಜನೆಯಡಿ 14 ಕೋಟಿ ರೈತರಿಗೆ ಸಹಾಯ ಧನವನ್ನು ಸರಕಾರ ಒದಗಿಸಲಿದೆ. ಇದರಿಂದ ಸರಕಾರದ ಮೇಲೆ ವಾರ್ಷಿಕ ರೂ. 87,000 ಕೋಟಿ ರೂ. ಹೊರೆ ಬೀಳಲಿದೆ. ಈಗಾಗಲೇ 7 ಕೋಟಿ ರೈತರು ಲಾಭ ಪಡೆದಿದ್ದಾರೆ. ಇದರ ಅಡಿಯಲ್ಲಿ ಪ್ರತಿ ರೈತನಿಗೆ ಮೂರು ಕಂತು ತಲಾ 2,000 ರೈಪಾಯಿಯಂತೆ ವಾರ್ಷಿಕ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಇದಕ್ಕೆ ಕರ್ನಾಟಕ ಸರಕಾರವು ಹೆಚ್ಚುವರಿಯಾಗಿ 4,000 ರೂ.ಗಳನ್ನು ಸೇರಿಸಿದೆ. ಈ ಯೋಜನೆಗೆ ದಿಲ್ಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಮಾತ್ರ ಸೇರಿಕೊಂಡಿಲ್ಲ.
 
ಡಿಸೆಂಬರ್. 1 ರಿಂದ ಕಡ್ಡಾಯ

ಪಿಎಂ ಕಿಸಾನ್‌ ಯೋಜನೆಯ ಫಲಾನುಭವಿ ರೈತರು ನವೆಂಬರ್. 30ರೊಳಗೆ ತಮ್ಮ ಆಧಾರ್‌ ಜೋಡಣೆ ಮಾಡಬೇಕು. ಇಲ್ಲದೇ ಹೋದರೆ, ಡಿಸೆಂಬರ್. 1ರಿಂದ ಅವರಿಗೆ ಯೋಜನೆಯ ಲಾಭ ದೊರೆಯುವುದಿಲ್ಲ.