ಪಾಕ್‌ ಸರಕುಗಳಿಗೆ ಕಸ್ಟಮ್ಸ್‌ ಸುಂಕದ ಬರೆ

0
477

ಪರಮಾಪ್ತ ರಾಷ್ಟ್ರ ಸ್ಥಾನಮಾನ ಹಿಂದಕ್ಕೆ ಪಡೆದ ಬೆನ್ನಲ್ಲೇ ಪಾಕಿಸ್ತಾನದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಭಾರತ
2019 ಫೆಬ್ರುವರಿ 16 ರ ಶನಿವಾರ ಶೇ 200ರಷ್ಟು ಹೆಚ್ಚಿಸಿದೆ.

ನವದೆಹಲಿ: ಪರಮಾಪ್ತ ರಾಷ್ಟ್ರ ಸ್ಥಾನಮಾನ ಹಿಂದಕ್ಕೆ ಪಡೆದ ಬೆನ್ನಲ್ಲೇ ಪಾಕಿಸ್ತಾನದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಭಾರತ 2019 ಫೆಬ್ರುವರಿ 16 ರ ಶ ಶನಿವಾರ ಶೇ 200ರಷ್ಟು ಹೆಚ್ಚಿಸಿದೆ.

ಪುಲ್ವಾಮಾ ದಾಳಿಯ ಬೆನ್ನಲ್ಲೇ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನ (ಎಂಎಫ್‌ಎನ್‌) ಹಿಂದಕ್ಕೆ ಪಡೆದಿತ್ತು.

ಸಿಮೆಂಟ್, ತಾಜಾ ಹಣ್ಣು, ಪೆಟ್ರೋಲಿಯಂ ಉತ್ಪನ್ನಗಳು, ಖನಿಜ, ಅದಿರು ಮತ್ತು ಚರ್ಮದ ಉತ್ಪನ್ನಗಳನ್ನು ಭಾರತವು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ.

ಇದರಿಂದ ಪಾಕಿಸ್ತಾನದ ಮೇಲೆ 3,482 ಕೋಟಿ ಆರ್ಥಿಕ ಹೊರೆ ಬೀಳಬಹುದು ಎಂದು ಹೇಳಲಾಗಿದೆ.

ಹೆಚ್ಚಿನ ಪರಿಣಾಮವಾಗದು: 
ಪಾಕಿಸ್ತಾನಕ್ಕೆ ಎಂಎಫ್‌ಎನ್‌ ಸ್ಥಾನಮಾನ ರದ್ದು ಮಾಡುವ ಭಾರತದ ನಿರ್ಧಾರದಿಂದ ಭಾವನಾತ್ಮಕ ಪರಿಣಾಮವಾಗಬಹುದೇ ಹೊರತು ಉಭಯ ರಾಷ್ಟ್ರಗಳ ವಾಣಿಜ್ಯ, ವಹಿವಾಟಿನ ಮೇಲೆ ಭಾರಿ ಪರಿಣಾಮವೇನೂ ಆಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಪಾಕಿಸ್ತಾನದ ಮೇಲೆ ವಾಣಿಜ್ಯ, ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ. ಒಂದು ವೇಳೆ ಪಾಕಿಸ್ತಾನ ಪ್ರತೀಕಾರ ಕ್ರಮ ತೆಗೆದುಕೊಂಡಲ್ಲಿ ಭಾರತದ ವಾಣಿಜ್ಯ ಕ್ಷೇತ್ರದ ಮೇಲೆ ಹೆಚ್ಚಿನ ದುಷ್ಪರಿಣಾಮವಾಗುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತ ನೀಡಿದ ಸೌಲಭ್ಯದ ಸಂಪೂರ್ಣ ಲಾಭ ಪಡೆಯಲು ಇನ್ನೂ ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ ಎನ್ನುವುದು ತಜ್ಞರು ನೀಡುವ ಪ್ರಮುಖ ಕಾರಣ.

ಎರಡೂ ರಾಷ್ಟ್ರಗಳ ನಡುವಿನ ವಾರ್ಷಿಕ ವಹಿವಾಟು ಮೊತ್ತ ಅಂದಾಜು 21,385 ಕೋಟಿ ಗಡಿಯನ್ನೂ ಮೀರುವುದಿಲ್ಲ. ಇದರಿಂದ ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ ಎನ್ನುವುದು ಅವರ ಅಭಿಮತ.

ಪಾಕಿಸ್ತಾನದಿಂದ ಆಮದು ಕಡಿತಗೊಳಿಸಿ ಆ ದೇಶಕ್ಕೆ ರಫ್ತು ಪ್ರಮಾಣ ಹೆಚ್ಚಿಸುವತ್ತ ಭಾರತ ಮುಂದಾಗಬೇಕು ಎಂದು ಭಾರತೀಯ ವಿದೇಶ ವಾಣಿಜ್ಯ ಸಂಸ್ಥೆಯ (ಐಐಎಫ್‌ಟಿ) ಅಂತರರಾಷ್ಟ್ರೀಯ ವಾಣಿಜ್ಯ ತಜ್ಞ ಮೋಹನ ಜೋಶಿ ಸಲಹೆ ಮಾಡಿದ್ದಾರೆ.

ಪಾಕಿಸ್ತಾನವು ದುಬೈ ಮತ್ತು ಸಿಂಗಪುರದ ಮೂಲಕ ಭಾರತಕ್ಕೆ ರಫ್ತು ಮಾಡುತ್ತದೆ. ಆ ಬಗ್ಗೆ ಭಾರತ ಗಮನ ಹರಿಸಬೇಕು ಎನ್ನುತ್ತಾರೆ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕ ವಿಶ್ವಜೀತ್‌ ಧರ್‌ 
ಹೇಳಿದ್ದಾರೆ.

ಎಂಎಫ್‌ಎನ್‌ ರದ್ದು: ಪಾಕ್‌ ಮೇಲೆ ಪರಿಣಾಮ ಏನು?

* ಎಂಎಫ್‌ಎನ್‌ ಸ್ಥಾನಮಾನ ಹಿಂದಕ್ಕೆ ಪಡೆಯುವುದರಿಂದ ಭಾರತದ ಜತೆಗಿನ ಪಾಕಿಸ್ತಾನದ ವಾಣಿಜ್ಯ, ವಹಿವಾಟು, ರಫ್ತು ಮತ್ತು ಆದಾಯಕ್ಕೆ ಪೆಟ್ಟು ಬೀಳಲಿದೆ

* ಸೀಮಾ ಸುಂಕ ಹೆಚ್ಚಳ, ಬಂದರು ಬಳಕೆ ಮೇಲೆ ನಿರ್ಬಂಧ, ಪಾಕಿಸ್ತಾನಿಂದ ವಸ್ತುಗಳ ಆಮದು ಮೇಲೆ ನಿಷೇಧ

* ಸೀಮಾ ಕಾಯ್ದೆ ಮತ್ತು ವಿದೇಶಿ ವಹಿವಾಟು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಅಡಿ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಇನ್ನೂ ಹಲವು ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ

* ಪಾಕಿಸ್ತಾನ 2017–18ರಲ್ಲಿ ಭಾರತದೊಂದಿಗೆ ₹3,482.30 ಕೋಟಿ ಮೊತ್ತದ ರಫ್ತು ವಹಿವಾಟು ನಡೆಸಿದೆ. ಆ ಮೊತ್ತ ಗಣನೀಯವಾಗಿ ಕುಸಿಯುವ ಸಾಧ್ಯತೆ