ಪಾಕ್‌ನಲ್ಲಿ ಉಗ್ರರ ಅಟ್ಟಹಾಸ; 39 ಬಲಿ

0
198

ಪಾಕಿಸ್ತಾನದ ಎರಡು ಸ್ಥಳಗಳಲ್ಲಿ ನವೆಂಬರ್ 23 ರ ಶುಕ್ರವಾರ ಮಾರಣಾಂತಿಕ ಬಾಂಬ್‌ ದಾಳಿಗಳು ನಡೆದಿವೆ. ಕರಾಚಿಯಲ್ಲಿನ ಚೀನಾ ಕಾನ್ಸುಲೇಟ್‌ ಕಚೇರಿ ಮೇಲೆನಡೆದ ಉಗ್ರರ ದಾಳಿ ಯತ್ನದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಪೆಶಾವರದ ಜನನಿಬಿಡ ಪ್ರದೇಶದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ 32 ಜನ ಪ್ರಾಣ ತೆತ್ತಿದ್ದಾರೆ.

ಕರಾಚಿ/ ಪೆಶಾವರ (ಪಿಟಿಐ):  ಪಾಕಿಸ್ತಾನದ ಎರಡು ಸ್ಥಳಗಳಲ್ಲಿ ನವೆಂಬರ್ 23 ರ ಶುಕ್ರವಾರ ಮಾರಣಾಂತಿಕ ಬಾಂಬ್‌ ದಾಳಿಗಳು ನಡೆದಿವೆ. ಕರಾಚಿಯಲ್ಲಿನ ಚೀನಾ ಕಾನ್ಸುಲೇಟ್‌ ಕಚೇರಿ ಮೇಲೆನಡೆದ ಉಗ್ರರ ದಾಳಿ ಯತ್ನದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಪೆಶಾವರದ ಜನನಿಬಿಡ ಪ್ರದೇಶದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ 32 ಜನ ಪ್ರಾಣ ತೆತ್ತಿದ್ದಾರೆ.

ಕರಾಚಿಯಲ್ಲಿನ ದಾಳಿಯ ಹೊಣೆಯನ್ನು ಬಲೂಚಿಸ್ತಾನ ಲಿಬರೇಷನ್‌ ಆರ್ಮಿ (ಬಿಎಲ್‌ಎ) ಹೊತ್ತಿದೆ. ‘ಬಲೂಚಿನ್ ನೆಲದಲ್ಲಿ ಚೀನಾ ಸೇನೆ ವಿಸ್ತರಣೆ ಪ್ರಯತ್ನವನ್ನು ಸಹಿಸುವುದಿಲ್ಲ’ ಎಂದು ಅದು ಎಚ್ಚರಿಸಿದೆ.

ಚೀನಾ ಕಾನ್ಸುಲೇಟ್‌ ಕಚೇರಿ ಇರುವ ಪ್ರದೇಶ ಬಿಗಿ ಭದ್ರತೆಯಿಂದ ಕೂಡಿದೆ. ರಾಜತಾಂತ್ರಿಕ ಕಚೇರಿಗಳು, ಶಾಲೆಗಳು ಮತ್ತು ಪ್ರತಿಷ್ಠಿತರು ಈ ಬಡಾವಣೆಯಲ್ಲಿ ವಾಸವಿದ್ದಾರೆ.

ಬೆಳಿಗ್ಗೆ 9.30ರ ಸುಮಾರಿಗೆ ಮೂವರು ಉಗ್ರರು ಮೊದಲು ಕಾನ್ಸುಲೇಟ್‌ ಹೊರವಲಯದ ಚೆಕ್‌ಪೋಸ್ಟ್‌ ಮೇಲೆ ದಾಳಿ ನಡೆಸಿ ಕೈಬಾಂಬ್‌ ಎಸೆದರು. ಅಲ್ಲಿದ್ದ ಇಬ್ಬರು ಪೊಲೀಸರು ಮತ್ತು ಇಬ್ಬರು ನಾಗರಿಕರನ್ನು ಕೊಂದ ಬಳಿಕ ಕಾನ್ಸುಲೇಟ್‌ನ ಗೇಟ್‌ನತ್ತ ನುಗ್ಗತೊಡಗಿದರು. ಆದರೆ ಅಷ್ಟರಲ್ಲಿ, ಕಾನ್ಸುಲೇಟ್‌ನ ಗೇಟನ್ನು ಮುಚ್ಚಿದ ಭದ್ರತಾ ಸೇವಕರು ಉಗ್ರರು ಒಳಬರದಂತೆ ತಡೆದರು. ಸ್ಥಳಕ್ಕೆ ಬಂದ ಅರೆಸೇನಾ ಪಡೆ ಸಿಬ್ಬಂದಿ ಮೂವರೂ ಉಗ್ರರನ್ನು ಕೊಂದು ಹಾಕಿದರು. ದಾಳಿಯನ್ನು ಖಂಡಿಸಿರುವ ಪ್ರಧಾನಿ ಇಮ್ರಾನ್ ಖಾನ್, ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್‌(ಸಿಪಿಇಸಿ) ಅನ್ನು ವಿರೋಧಿಸುವ ಮತ್ತು ಚೀನಾ ಹೂಡಿಕೆದಾರರನ್ನು ಹೆದರಿಸುವ ಉದ್ದೇಶವನ್ನು ಉಗ್ರರು ಹೊಂದಿದ್ದಾರೆ. ಈ ಕೃತ್ಯದಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.

ಚೀನಾ ಖಂಡನೆ

ಕಾನ್ಸುಲೇಟ್ ಕಚೇರಿ ಮೇಲಿನ ಉಗ್ರರ ದಾಳಿಯನ್ನು ಚೀನಾ ಖಂಡಿಸಿದೆ. ಸಿಪಿಇಸಿ ಯೋಜನೆಗೂ ಈ ದಾಳಿಗೂ ಸಂಬಂಧ ಇದ್ದಂತಿದೆ. ಪಾಕಿಸ್ತಾನದಲ್ಲಿ ನೂರಾರು ಚೀನಾ ನಾಗರಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪಾಕಿಸ್ತಾನ ಸೂಕ್ತ ಭದ್ರತೆ ಒದಗಿಸಬೇಕು ಎಂದು ಚೀನಾ ವಿದೇಶಾಂಗ ಸಚಿವರು 
ಒತ್ತಾಯಿಸಿದ್ದಾರೆ.