ಪಾಕ್‌ಗೆ ಯುದ್ಧನೌಕೆ(ಪೂರೈಕೆ ಮಾಡಲಿರುವ ಚೀನಾ)

0
679

ಪ್ರಮುಖ ದ್ವಿಪಕ್ಷೀಯ ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿ, ಪಾಕಿಸ್ತಾನಕ್ಕಾಗಿ ಚೀನಾ ಹೆಚ್ಚು ಸುಧಾರಿತ ಯುದ್ಧನೌಕೆ ನಿರ್ಮಿಸಿಕೊಡಲು ಮುಂದಾಗಿದೆ.

ಬೀಜಿಂಗ್ (ಪಿಟಿಐ): ಪ್ರಮುಖ ದ್ವಿಪಕ್ಷೀಯ ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿ, ಪಾಕಿಸ್ತಾನಕ್ಕಾಗಿ ಚೀನಾ ಹೆಚ್ಚು ಸುಧಾರಿತ ಯುದ್ಧನೌಕೆ ನಿರ್ಮಿಸಿಕೊಡಲು ಮುಂದಾಗಿದೆ.

‘ಆಧುನಿಕ ಶಸ್ತ್ರಾಸ್ತ್ರ ಮತ್ತು ಶೋಧ ವ್ಯವಸ್ಥೆ ಹೊಂದಿರುವ ಈ ಯುದ್ಧನೌಕೆ, ಜಲಾಂತರ್ಗಾಮಿ ಆಗಿರಲಿದೆ. ವೈಮಾನಿಕ ರಕ್ಷಣೆ ಒದಗಿಸುವಲ್ಲಿಯೂ ಸಮರ್ಥವಾಗಿರಲಿದೆ’ ಎಂದು ಚೀನಾ ಸರ್ಕಾರಿ ನೌಕಾ ನಿರ್ಮಾಣ ಸಮಿತಿ (ಸಿಎಸ್‌ಎಸ್‌ಸಿ) ಹೇಳಿದ್ದಾಗಿ ಚೀನಾ ಡೈಲಿ ವರದಿ ಮಾಡಿದೆ.  ಈಗಾಗಲೇ ನಿರ್ಮಾಣ ಹಂತದಲ್ಲಿರುವ ಈ ನೌಕೆ, ಚೀನಾ ನೌಕಾಪಡೆಯ ಸುಧಾರಿತ ಕ್ಷಿಪಣಿ ನೌಕೆಯ ಮತ್ತೊಂದು ಆವೃತ್ತಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಇಂತಹದ್ದೇ ನಾಲ್ಕು ಯುದ್ಧನೌಕೆಗಳನ್ನು ನಿರ್ಮಿಸಿಕೊಡಲು ಪಾಕಿಸ್ತಾನದ ನೌಕಾಪಡೆ ಈಹಿಂದೆಯೇ ಚೀನಾವನ್ನು ಕೋರಿದೆ ಎಂದೂ ಉಲ್ಲೇಖಿಸಲಾಗಿದೆ. 

‘ಬೃಹತ್ ಹಾಗೂ ತಾಂತ್ರಿಕವಾಗಿ ಸುಧಾರಿತವಾಗಿರುವ ಈ ಯುದ್ಧನೌಕೆ ಪಾಕ್ ಸೇನೆಗೆ ಸೇರ್ಪಡೆಯಾದ ಬಳಿಕ ಪಾಕಿಸ್ತಾನದ ಸಾಮರ್ಥ್ಯ ಹೆಚ್ಚಲಿದೆ’ ಎಂದು ವರದಿ ತಿಳಿಸಿದೆ. 

ಸಮುದ್ರದ ದೂರ ತೀರದ ಮೇಲೆ ಕಣ್ಗಾವಲು ಇರಿಸುವ ಮೂಲಕ, ಅಂತರರಾಷ್ಟ್ರೀಯ ಸರಕು ಸಾಗಣೆಗೆ ಸಮುದ್ರಮಾರ್ಗಗಳನ್ನು ಸುರಕ್ಷಿತವಾಗಿರಿಸಲು ಪಾಕಿಸ್ತಾನಕ್ಕೆ ಈ ಯುದ್ಧನೌಕೆಯಿಂದ ಸಹಾಯವಾಗಲಿದೆ. 

ಸಮಾನ ಅಧಿಕಾರಕ್ಕೆ ನೆರವು?

‘ಈಗಾಗಲೇ ಚೀನಾ– ‍‍ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಅಡಿಯಲ್ಲಿ ಪಾಕಿಸ್ತಾನದ ಬಂದರನ್ನು ಚೀನಾ ತನ್ನ ವಶಕ್ಕೆ ಪಡೆದಿದೆ. ಇದೀಗ ಈ ಯುದ್ಧನೌಕೆ ಒದಗಿಸುವ ಮೂಲಕ, ಹಿಂದೂ ಮಹಾಸಾಗರದ ಮೇಲೆ ಪಾಕಿಸ್ತಾನ ಸಮಾನ ಅಧಿಕಾರ ಹೊಂದಲು ಚೀನಾ ನೆರವು ನೀಡುವ ಸಾಧ್ಯತೆ ಇದ್ದು, ಇದು ಮಹತ್ವದ್ದಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.