ಪಾಕ್​ನಲ್ಲಿ ಲೀಟರ್ ಹಾಲಿಗೆ 180 ರೂ: ತೀವ್ರ ಹದಗೆಟ್ಟ ಆರ್ಥಿಕ ಸ್ಥಿತಿ

0
41

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಈಗ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಾಲು ಲೀಟರ್​ಗೆ 180 ರೂ. ಆಗಿದೆ. ಮಕ್ಕಳಿಗೂ ಹಾಲು ಸಿಗದ ಪರಿಸ್ಥಿತಿ ನಿರ್ವಣವಾಗಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ.

ಇಸ್ಲಾಮಾಬಾದ್: ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಈಗ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಾಲು ಲೀಟರ್​ಗೆ 180 ರೂ. ಆಗಿದೆ. ಮಕ್ಕಳಿಗೂ ಹಾಲು ಸಿಗದ ಪರಿಸ್ಥಿತಿ ನಿರ್ವಣವಾಗಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ.

ಸೇಬು ಹಣ್ಣು ಕೆಜಿಗೆ 400 ರೂ. ಆಗಿದ್ದರೆ, ಕುರಿಮಾಂಸ ಕೆಜಿಗೆ 1,100 ರೂ. ತಲುಪಿದೆ. ರಂಜಾನ್ ತಿಂಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಉಪವಾಸವಿರುವ ಜನರು ಉಪವಾಸ ಮುಗಿದ ನಂತರವೂ ಹೊಟ್ಟೆತುಂಬ ಊಟ ಮಾಡಲಾರದಂತಹ ಪರಿಸ್ಥಿತಿ ನಿರ್ವಣವಾಗಿದೆ. ಈರುಳ್ಳಿ ಬೆಲೆ ಶೇ. 40, ಟೊಮ್ಯಾಟೋ ಬೆಲೆ ಶೇ. 19 ಮತ್ತು ಹೆಸರು ಬೇಳೆ ಬೆಲೆ ಶೇ.13 ಏರಿಕೆ ಕಂಡಿವೆ. ಸಕ್ಕರೆ, ಕೋಳಿ, ಮೀನು, ಮಸಾಲೆ ಪದಾರ್ಥ, ತುಪ್ಪ, ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಟೀ ಮುಂತಾದವುಗಳ ಬೆಲೆಯೂ ಏರಿಕೆಯಾಗಿದೆ. ಆಟೋ, ಸಿಮೆಂಟ್ ಮತ್ತು ಔಷಧ ತಯಾರಿಕಾ ಕ್ಷೇತ್ರದ ಕಚ್ಚಾವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆ ನಿರೀಕ್ಷಿಸಲಾಗಿದೆ.

ಮುಗ್ಗಟ್ಟಿಗೆ ಕಾರಣವೇನು?

ಪಾಕಿಸ್ತಾನ ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರ ಏರಿಕೆ ಆರ್ಥಿಕ ಮುಗ್ಗಟ್ಟಿಗೆ ಪ್ರಮುಖ ಕಾರಣವಾಗಿದೆ. ದೇಶದ ವ್ಯಾಪಾರ ವಹಿವಾಟು ಕೂಡ ಕುಸಿದಿದೆ. ಮೇ ತಿಂಗಳ ಆರಂಭದಿಂದಲೇ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಇಳಿಕೆಯಾಗುತ್ತಲೇ ಸಾಗುತ್ತಿದೆ. ಬುಧವಾರ ಡಾಲರ್ ಎದುರು ರೂಪಾಯಿ ಮೌಲ್ಯ 154ಕ್ಕೆ ಕುಸಿದಿದ್ದು, ಇದರಿಂದ ಆಮದು ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ.

ವಿದೇಶಿ ಹೂಡಿಕೆ ಭಾರಿ ಕುಸಿತ

ಪಾಕಿಸ್ತಾನದ ಆರ್ಥಿಕ ಮುಗ್ಗಟ್ಟಿಗೆ ವಿದೇಶಿ ಬಂಡವಾಳ ಹೂಡಿಕೆ ಇಳಿಕೆಯೂ ಪ್ರಮುಖ ಕಾರಣವಾಗಿದೆ. ಕಳೆದ 10 ತಿಂಗಳ ಅವಧಿಯಲ್ಲಿ ಪಾಕ್​ನಲ್ಲಿ ಕೇವಲ 1.36 ಬಿಲಿಯನ್ ಡಾಲರ್​ನ ಹೂಡಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2.48 ಬಿಲಿಯನ್ ಡಾಲರ್ ಹೂಡಿಕೆಯಾಗಿತ್ತು. ಈ ವರ್ಷ ಅರ್ಧದಷ್ಟು ಇಳಿಕೆಯಾಗಿದೆ. ಈ ಬೆಳವಣಿಗೆಗಳಿಗೆ ಪ್ರಮುಖ ಕಾರಣ ಚೀನಾ. ಕಳೆದ ವರ್ಷ ಜುಲೈನಿಂದ ಏಪ್ರಿಲ್ ಅವಧಿಯಲ್ಲಿ 1.73 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಚೀನಾ ಈ ಬಾರಿ ಇದೇ ಅವಧಿಯಲ್ಲಿ ಕೇವಲ 42.9 ಕೋಟಿ ಡಾಲರ್ ಹೂಡಿಕೆ ಮಾಡಿದೆ. ಚೀನಾ- ಪಾಕ್ ಕಾರಿಡಾರ್​ನ ಕೆಲಸ ಅಂತ್ಯಗೊಳ್ಳುವ ಹಂತದಲ್ಲಿದ್ದು, ಆ ಕಾರಣದಿಂದ ಚೀನಾ ಪಾಕ್​ನಲ್ಲಿ ಹೂಡಿಕೆಯನ್ನು ಇದ್ದಕ್ಕಿದ್ದಂತೆ ಕಡಿಮೆ ಮಾಡಿದೆ ಎನ್ನಲಾಗಿದೆ. ಬ್ರಿಟನ್ ಮತ್ತು ಅಮೆರಿಕ ಕೂಡ ಪಾಕ್​ನಲ್ಲಿ ಬಂಡವಾಳ ಹೂಡಿಕೆ ಮಾಡಲು ನಿರಾಕರಿಸುತ್ತಿವೆ.