ಪಾಕ್​ಗೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗ: ಜಾಧವ್​ ಗಲ್ಲು ಶಿಕ್ಷೆ ಮರುಪರಿಶೀಲಿಸಲು ಆದೇಶ

0
64

ಅಂತಾರಾಷ್ಟ್ರೀಯ ನ್ಯಾಯಾಲಯವು, ಕುಲಭೂಷಣ್​ ಜಾಧವ್​ ಪ್ರಕರಣದಲ್ಲಿ ​ ಅವರಿಗೆ ರಾಜತಾಂತ್ರಿಕ ನೆರವಿನ ಅಭಯ ನೀಡುವ ಮೂಲಕ ಪಾಕಿಸ್ತಾನ ನೀಡಿರುವ ಗಲ್ಲು ಶಿಕ್ಷೆಯನ್ನು ಮತ್ತೊಮ್ಮೆ ಪರಿಣಾಮಕಾರಿಯಾಗಿ ಮರುಪರಿಶೀಲಿಸ ಬೇಕೆಂದು ಆದೇಶಿಸಿದೆ.

ನವದೆಹಲಿ​: ಬೇಹುಗಾರಿಕೆ ಹಾಗೂ ವಿಧ್ವಸಂಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂಬ ಆರೋಪದಲ್ಲಿ ಪಾಕಿಸ್ತಾನದಿಂದ ಗಲ್ಲು ಶಿಕ್ಷಗೆ ಒಳಗಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್​ ಜಾಧವ್​ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಹೇಗ್​ನಿಂದ ಭಾರತದ ಪರವಾಗಿ ತೀರ್ಪು ಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕ್​ಗೆ ಭಾರಿ ಮುಖಭಂಗವಾಗಿದೆ.

ಜುಲೈ 17 ರ ಬುಧವಾರ ಸಂಜೆ ತೀರ್ಪು ಪ್ರಕಟಿಸಿದ ಐಸಿಜೆ, ಜಾಧವ್​ ಅವರಿಗೆ ರಾಜತಾಂತ್ರಿಕ ನೆರವಿನ ಅಭಯ ನೀಡುವ ಮೂಲಕ ಜಾಧವ್​ ಪ್ರಕರಣದಲ್ಲಿ ಪಾಕಿಸ್ತಾನ ನೀಡಿರುವ ಗಲ್ಲು ಶಿಕ್ಷೆಯನ್ನು ಮತ್ತೊಮ್ಮೆ ಪರಿಣಾಮಕಾರಿಯಾಗಿ ಮರುಪರಿಶೀಲಿಸ ಬೇಕೆಂದು ಆದೇಶಿಸಿದೆ. ಅಲ್ಲಿಯವರೆಗೆ ಗಲ್ಲು ಶಿಕ್ಷೆಯನ್ನು ಅಮಾನತಿನಲ್ಲಿ ಇಡುವಂತೆ ಸೂಚಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿರುವುದನ್ನು ಎತ್ತಿಹಿಡಿದಿದೆ.

ಜಾಧವ್​ಗೆ ರಾಜತಾಂತ್ರಿಕ ನೆರವಿಗೆ ಅವಕಾಶ ನೀಡದೆ ಏಕಪಕ್ಷೀಯವಾಗಿ ಪಾಕ್​ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಆರೋಪಿಸಿ, ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಯನ್ನು ಏರಿತ್ತು.

ಜಾಧವ್​ ಬಿಡುಗಡೆಗಾಗಿ ಅಸಂಖ್ಯಾತ ಭಾರತೀಯರು ಪೂಜೆ ಪುನಸ್ಕಾರಗಳ ಮೂಲಕ ದೇವರಲ್ಲಿ ಸಾಮೂಹಿಕವಾಗಿ ಬುಧವಾರ ಪಾರ್ಥನೆ ಸಲ್ಲಿಸಿದ್ದರು.

ಪ್ರಕರಣದ ಹಿನ್ನೋಟ

ಮಾರ್ಚ್​​ 3, 2016: ಭಾರತದ ಪರ ಬೇಹುಗಾರಿಕೆ ಹಾಗೂ ಪಾಕ್​ ವಿರುದ್ಧದ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿ ಬಲೂಚಿಸ್ತಾನ್​ನ ಮಸ್ಕೆಲ್​ ಪ್ರದೇಶದಲ್ಲಿ ಗುಪ್ತಚರ ಕಾರ್ಯಾಚರಣೆಯಲ್ಲಿ ಜಾಧವ್​ ಅವರನ್ನು ಬಂಧಿಸಲಾಗಿತ್ತು.

ಮಾರ್ಚ್​ 25, 2016: ಭಾರತೀಯ ನೌಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಜಾಧವ್​ ತಪ್ಪೊಪ್ಪಿಗೆ ಎನ್ನಲಾದ ವಿಡಿಯೋ ಸಂದೇಶವೊಂದನ್ನು ಪಾಕ್​ ಬಿಡುಗಡೆ ಮಾಡಿತ್ತು. ಆದರೆ, ಅದೇ ದಿನ ಭಾರತ ಇದನ್ನು ತಳ್ಳಿಹಾಕಿ ಜಾಧವ್​​ ಮಾಜಿ ನೌಕಾಧಿಕಾರಿಯಾಗಿದ್ದು, ಈಗ ಸೇವೆಯಲ್ಲಿಲ್ಲ. ಅವರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಹೇಳಿತ್ತು.

ಏಪ್ರಿಲ್​ 8, 2016: ಭಯೋತ್ಪಾದನಾ ನಿಗ್ರಹ ಇಲಾಖೆಯಲ್ಲಿ ಜಾಧವ್​ ವಿರುದ್ಧ ಪಾಕ್​ ಎಫ್​ಐಆರ್​ ದಾಖಲಿಸಿತ್ತು.

ಮೇ 2, 2016: ಪಾಕ್​ನಿಂದ ಜಾಧವ್​ ವಿರುದ್ಧ ಪ್ರಾರಂಭಿಕ ಹಂತದ ವಿಚಾರಣೆ ಆರಂಭ.

ಜನವರಿ 2017: ವಿಶ್ವಸಂಸ್ಥೆಯ ಪಾಕ್​ನ ರಾಯಭಾರಿ ಮಲೀಹಾ ಲೂಧಿ ವಿಶ್ವಸಂಸ್ಥೆ ಮುಖ್ಯಸ್ಥರ ಮುಂದೆ ದಸ್ತಾವೇಜೊಂದನ್ನು ಪ್ರಸ್ತುತ ಪಡಿಸಿ, ಪಾಕ್​ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಭಾರತ ತೊಡಗಿರುವುದರಿಂದ ಜಾಧವ್​ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದರು.

ಏಪ್ರಿಲ್​ 10, 2017: ಭಾರತದ ಗೂಢಚಾರ ಹಾಗೂ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಮಿಲಿಟರಿ ಕೋರ್ಟ್​ನಿಂದ ಗಲ್ಲು ಶಿಕ್ಷೆ ಪ್ರಕಟ.

ಮೇ 08, 2017: ಪಾಕ್​ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೊರೆ ಹೋಗಿ ಜಾಧವ್​ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪ.

ಮೇ 08, 2017: ಅಂತಿಮ ತೀರ್ಪು ಬರುವವರೆಗೂ ಜಾಧವ್​ ಮರಣದಂಡನೆಗೆ ಅಂತರಾಷ್ಟ್ರೀಯ ನ್ಯಾಯಾಲಯದಿಂದ ತಡೆಯಾಜ್ಞೆ. ಈ ಪ್ರಕರಣ ಐಸಿಜೆ ನ್ಯಾಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪಾಕ್​ ವಾದವನ್ನು ತಿರಸ್ಕರಿಸಿದ ಐಸಿಜೆ, ವಿಯೆನ್ನಾ ಒಪ್ಪಂದದ ಉಲ್ಲಂಘನೆ ಆರೋಪ ಕೇಳಿಬಂದಿರುವುದರಿಂದ ನಮ್ಮ ಒಳಗೊಳ್ಳುವಿಕೆ ಇದೆ ಎಂದು ಸಮರ್ಥನೆ.

ಸೆಪ್ಟೆಂಬರ್​ 2017: ಭಾರತದಿಂದ ಐಸಿಜೆಗೆ ಲಿಖಿತ ಮನವಿ ಸಲ್ಲಿಕೆ. ಜಾಧವ್​ ಅವರಿಗೆ ದೂತಾವಾಸದ ಪ್ರವೇಶ ನಿರಾಕರಣೆ ಮಾಡುವ ಮೂಲಕ ಪಾಕ್ ವಿಯೆನ್ನಾ ಒಪ್ಪಂದದ ಉಲ್ಲಂಘನೆ ಆಗಿದೆ ಎಂದು ಆರೋಪ.

ನವೆಂಬರ್​ 10, 2017: ಮಾನವೀಯತೆ ದೃಷ್ಟಿಯಿಂದ ಜಾಧವ್​ ಪತ್ನಿಗೆ ಪತಿಯನ್ನ ಭೇಟಿ ಮಾಡಲು ಪಾಕ್​ನಿಂದ ಅವಕಾಶ.

ಡಿಸೆಂಬರ್​ 13, 2017: ಭಾರತ ವಿರುದ್ಧ ಐಸಿಜೆಯಲ್ಲಿ ಪಾಕ್​ನಿಂದ ಪ್ರತಿವಾದ ಸಲ್ಲಿಕೆ. ಬೇಹುಗಾರಿಕೆ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದ ಅನ್ವಯಿಸುವುದಿಲ್ಲ ಎಂದು ಪಾಕ್​ ವಾದ.

ಡಿಸೆಂಬರ್​ 25, 2017: ಪಾಕ್​ ವಿದೇಶಿ ಕಚೇರಿಯಲ್ಲಿ ಜಾಧವ್​, ಪತ್ನಿ ಹಾಗೂ ತಾಯಿ ಭೇಟಿಗೆ ಅವಕಾಶ. ಭೇಟಿ ಉತ್ತಮವಾಗಿದ್ದರೂ, ಜಾಧವ್ ಅವರ ತಾಯಿ ಮತ್ತು ಹೆಂಡತಿಯನ್ನು ಭದ್ರತಾ ತಪಾಸಣೆಗೆ ಒಳಪಡಿಸಿದ ವಿಚಾರದಲ್ಲಿ ಉಭಯ ದೇಶಗಳ ನಡುವೆ ತಿಕ್ಕಾಟಕ್ಕೆ ಕಾರಣ.

ಫೆಬ್ರವರಿ 19, 2019: ಪುಲ್ವಾಮ ದಾಳಿಯ ನಂತರ ಭಾರತ ಮತ್ತು ಪಾಕ್​ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಐಸಿಜೆ ಜಾಧವ್​ ಪ್ರಕರಣದಲ್ಲಿ ನಾಲ್ಕು ದಿನಗಳ ಸಾರ್ವಜನಿಕ ವಿಚಾರಣೆಯನ್ನು ನಡೆಸಿತ್ತು. ಈ ವೇಳೆ ಜಾಧವ್ ಅವರ ಅಪರಾಧವನ್ನು ರದ್ದುಗೊಳಿಸುವಂತೆ ಭಾರತ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವನ್ನು ಕೇಳಿಕೊಂಡಿತ್ತು. (ಏಜೆನ್ಸೀಸ್​)