ಪಾಕಿಸ್ತಾನದಲ್ಲಿ ಟ್ವಿಟರ್​ಗೆ ನಿಷೇಧದ ಭೀತಿ

0
534

ತನ್ನ ವಿಚಾರ ವಿನಿಮಯ ವೇದಿಕೆಯಲ್ಲಿರುವ ಆಕ್ಷೇಪಾರ್ಹ ವಿಷಯಗಳು, ಸಂದೇಶಗಳನ್ನು ತೆಗೆಯದೇ ಹೋದರೆ ದೇಶದಲ್ಲಿ ಟ್ವಿಟರ್​ನ್ನು ನಿಷೇಧಿಸಲಾಗುವುದು ಎಂದು ಪಾಕಿಸ್ತಾನದ ಟೆಲಿಕಾಮ್​ ಪ್ರಾಧಿಕಾರ ಟ್ವಿಟರ್​ಗೆ ಎಚ್ಚರಿಕೆ ನೀಡಿದೆ.

ಇಸ್ಲಾಮಾಬಾದ್​: ತನ್ನ ವಿಚಾರ ವಿನಿಮಯ ವೇದಿಕೆಯಲ್ಲಿರುವ ಆಕ್ಷೇಪಾರ್ಹ ವಿಷಯಗಳು, ಸಂದೇಶಗಳನ್ನು ತೆಗೆಯದೇ ಹೋದರೆ ದೇಶದಲ್ಲಿ ಟ್ವಿಟರ್​ನ್ನು ನಿಷೇಧಿಸಲಾಗುವುದು ಎಂದು ಪಾಕಿಸ್ತಾನದ ಟೆಲಿಕಾಮ್​ ಪ್ರಾಧಿಕಾರ ಟ್ವಿಟರ್​ಗೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ (ಪಿಟಿಎ) ಆಗಸ್ಟ್ 16 ರ ಗುರುವಾರ ಪಾಕಿಸ್ತಾನದ ಸಂಪುಟದ ಸ್ಥಾಯಿ ಸಮಿತಿಗೆ ಈ ವಿಚಾರವನ್ನು ತಿಳಿಸಿದ್ದು, ” ಫೇಸ್​ಬುಕ್​, ಯೂಟ್ಯೂಬ್​ ಮತ್ತು ಇತರ ಸಾಮಾಜಿಕ ತಾಣಗಳು ದೇಶದ ಟೆಲಿಕಾಂ ನಿಯಮಗಳನ್ನು ಪಾಲಿಸುತ್ತಿವೆ. ಆಕ್ಷೇಪಾರ್ಹ ಸಂಗತಿಗಳನ್ನು ರದ್ದುಗೊಳಿಸುತ್ತಿವೆ. ಆದರೆ, ಟ್ವಿಟರ್​ ಮಾತ್ರ ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ,” ಎಂದು ದೂರಿದೆ.

ಸುಮಾರು 100ಕ್ಕೂ ಹೆಚ್ಚು ಆಕ್ಷೇಪಾರ್ಹ ಸಂಗತಿಗಳು, ಅಪರಾಧಿಕ ವಿಷಯಗಳು ಟ್ವಿಟರ್​ನಲ್ಲಿದ್ದು, ಅವುಗಳನ್ನು ತೆಗೆದು ಹಾಕುವಂತೆ ನಾವು ನೀಡಿದ ಪ್ರಸ್ತಾಪವನ್ನು ಟ್ವಿಟರ್​ ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ. ನಾವು ನೀಡಿದ ದೂರಿನಲ್ಲಿ ಶೇ.5ರಷ್ಟು ಪ್ರಕರಣಗಳನ್ನು ಮಾತ್ರ ಇತ್ಯರ್ಥ ಮಾಡಿರುವ ಟ್ವಿಟರ್​ ಇನ್ನುಳಿದಿರುವ ಪ್ರಕರಣಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಪಿಟಿಎ ಈ ನಿರ್ಧಾರಕ್ಕೆ ಬಂದಿದೆ ಎಂದು ಪ್ರಾಧಿಕಾರದ ಅಧಿಕಾರಿ ನಿಸಾರ್​ ಅಹಮದ್​ ಎಂಬುವವರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಸಾಮಾಜಿಕ ತಾಣಗಳಿಗೆ ಮೂಗುದಾರ ಹಾಕಿದ ಪ್ರಸಂಗ ಇದೇ ಮೊದಲೇನಲ್ಲ. 2008 ಮತ್ತು 2010ರಲ್ಲಿ ಫೇಸ್​ಬುಕ್​ ಎರಡು ಬಾರಿ ನಿಷೇಧಗೊಂಡಿತ್ತು. ಇನ್ನು 2012ರಲ್ಲಿ ಯೂಟ್ಯೂಬ್​ ಎರಡು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿತ್ತು. ಈಗಿನ ಸರದಿ ಟ್ವಿಟರ್​ನದ್ದು.