ಪರವಾನಗಿಗಾಗಿ ಏರ್‌ ಏಷ್ಯಾ ಲಂಚ ನೀಡಿದ ಪ್ರಕರಣ: ಸಿಬಿಐನಿಂದ ಎಫ್‌ಐಆರ್‌

0
24

ಅಂತರರಾಷ್ಟ್ರೀಯ ಹಾರಾಟ ಪರವಾನಗಿ ಪಡೆಯಲು ಖಾಸಗಿ ವಿಮಾನಯಾನ ಸಂಸ್ಥೆ ಏರ್‌ ಏಷ್ಯಾ ಲಂಚ ನೀಡಿದೆ ಎಂದು ಹೇಳಲಾದ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ಸಿಬಿಐ ತನಿಖೆ ಆರಂಭಿಸಿದೆ.

ನವದೆಹಲಿ: ಅಂತರರಾಷ್ಟ್ರೀಯ ಹಾರಾಟ ಪರವಾನಗಿ ಪಡೆಯಲು ಖಾಸಗಿ ವಿಮಾನಯಾನ ಸಂಸ್ಥೆ ಏರ್‌ ಏಷ್ಯಾ ಲಂಚ ನೀಡಿದೆ ಎಂದು ಹೇಳಲಾದ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ಸಿಬಿಐ ತನಿಖೆ ಆರಂಭಿಸಿದೆ.

ಏರ್‌ ಏಷ್ಯಾ ಸಂಸ್ಥೆಯ ಅಧಿಕಾರಿಗಳ ಖಾತೆಯಿಂದ 12.78 ಕೋಟಿ ಹಣ ವರ್ಗಾವಣೆಯಾಗಿದ್ದು, ಇದನ್ನು ಲಂಚವಾಗಿ ನೀಡಿರಬಹುದು ಎಂದು ಸಿಬಿಐ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಯುಪಿಎ ಕೊನೆಯ ವರ್ಷ ಮತ್ತು ಎನ್‌ಡಿಎ ಅಧಿಕಾರ ಅವಧಿಯ ಮೊದಲ ಎರಡು ವರ್ಷದಲ್ಲಿ (2013–2016) ಈ ಪ್ರಕರಣ ನಡೆದಿರಬಹುದು ಎಂದು ಸಿಬಿಐ ಅಧಿಕಾರಿಗಳು ಶಂಕಿಸಿದ್ದಾರೆ.

ಪರವಾನಗಿ ನೀಡಿದ ಸರ್ಕಾರಿ ಅಧಿಕಾರಿಗಳು ಮತ್ತು ಏರ್‌ ಏಷ್ಯಾ ಅಧಿಕಾರಿಗಳ ಬ್ಯಾಂಕ್‌ ಖಾತೆ ಮತ್ತು ಹಣಕಾಸು ವಹಿವಾಟುಗಳನ್ನು ಸಿಬಿಐ ಜಾಲಾಡುತ್ತಿದೆ.

ನಿಯಮಾವಳಿ ಉಲ್ಲಂಘಿಸಿ ಪರವಾನಗಿ ಪಡೆಯಲು ಏರ್‌ ಏಷ್ಯಾ (ಇಂಡಿಯಾ) 2015–16ರಲ್ಲಿ ಸಿಂಗಪುರದ ಎಚ್‌ಎನ್‌ಆರ್‌ ಸಂಸ್ಥೆಗೆ 12.78 ಕೋಟಿ ನೀಡಿದೆ ಎಂದಿರುವ ಸಿಬಿಐ, ಸಂಸ್ಥೆಯ ನಿರ್ದೇಶಕ ರಾಜೇಂದ್ರ ದುಬೆ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಆರೋಪ ಅಲ್ಲಗಳೆದ ಏರ್‌ ಏಷ್ಯಾ: ಈ ಎಲ್ಲ ಆರೋಪಗಳನ್ನು ಏರ್‌ ಏಷ್ಯಾ ತಳ್ಳಿ ಹಾಕಿದೆ. ಇವು ನಿರಾಧಾರ ಆರೋಪ ಎಂದು ಏರ್‌ ಏಷ್ಯಾ ಇಂಡಿಯಾ ನಿರ್ದೇಶಕ ಆರ್.ವೆಂಕಟರಾಮನ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಟಾಟಾ ಸನ್ಸ್‌ ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಸೇಡು ತೀರಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಏರ್‌ ಏಷ್ಯಾ ಸಂಸ್ಥೆಯಲ್ಲಿ ಟಾಟಾ ಸಂಸ್ಥೆ ಪಾಲು ಹೊಂದಿದೆ.