ಪದ್ಮ ಭೂಷಣ ಪ್ರಶಸ್ತಿಗೆ ಪಿವಿ ಸಿಂಧು ಹೆಸರು ಶಿಫಾರಸ್ಸು

0
17

ವಿಶ್ವ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾಸಚಿವಾಲಯ ಶಿಫಾರಸ್ಸು ಮಾಡಿದೆ.

ಕೇಂದ್ರ ಕ್ರೀಡಾಸಚಿವಾಲಯ ಸೋಮವಾರ ಶಿಫಾರಸು ಪಿ.ವಿ ಸಿಂಧು ಅವರ ಹೆಸರನ್ನು ಪ್ರತಿಷ್ಛಿತ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದು, ಈ ಹಿಂದೆ ಇದೇ ಪ್ರಶಸ್ತಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಆ ಮೂಲಕ ಪಿವಿ ಸಿಂಧು 2017ರ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸುಗೊಂಡಿರುವ ಭಾರತದ ಎರಡನೇ ಅಥ್ಲೀಟ್ ಆಗಿದ್ದಾರೆ.
ಇತ್ತೀಚೆಗಷ್ಟೇ ಪಿವಿ ಸಿಂಧು ಕೊರಿಯಾ ಓಪನ್ ಸೂಪರ್ ಸರಣಿ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಶಟ್ಲರ್ ಎನಿಸಿಕೊಂಡಿದ್ದರು. ವಿಶ್ವದ ನಂ.2 ಆಟಗಾರ್ತಿಯಾಗಿರುವ ಸಿಂಧು 2015ರ ಮಾರ್ಚ್‌ನಲ್ಲಿ ಭಾರತದ ನಾಲ್ಕನೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪದ್ಮಶ್ರೀಗೆ ಭಾಜನರಾಗಿದ್ದರು. 22 ವರ್ಷದ ಸಿಂಧು ಪ್ರಸ್ತುತ ಭರ್ಜರಿ ಫಾರ್ಮ್‌ ನಲ್ಲಿದ್ದು ಗ್ಲಾಸ್ಗೊದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ದ್ವಿತೀಯ ಸ್ಥಾನ, ಇಂಡಿಯಾ ಓಪನ್ ಸೂಪರ್ ಸರಣಿ ಹಾಗೂ ಸೈಯದ್ ಮೋದಿ ಇಂಟರ್‌ ನ್ಯಾಷನಲ್ ಟೂರ್ನಿಯಲ್ಲಿ ಈಗಾಗಲೇ ಪ್ರಶಸ್ತಿ ಜಯಿಸಿದ್ದಾರೆ. ಇದಕ್ಕೂ ಮೊದಲು ರಿಯೋ ಡಿ ಜನೈರೋದಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದ ಭಾರತದ ಏಕೈಕ ಶಟ್ಲರ್ ಎಂಬ ಕೀರ್ತಿಗೂ ಭಾಜನರಾಗಿದ್ದರು.
ಭಾರತ 2007ರಲ್ಲಿ ಟ್ವೆಂಟಿ-20 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆಲ್ಲಲು ತಂಡವನ್ನು ಮುನ್ನಡೆಸಿದ್ದ ಧೋನಿ ಹೆಸರನ್ನು ಸೆಪ್ಟೆಂಬರ್ 20 ರಂದು ಬಿಸಿಸಿಐ ಪದ್ಮಭೂಷಣ ಪ್ರಶಸ್ತಿ ಶಿಫಾರಸು ಮಾಡಿತ್ತು.