ಪತ್ರಕರ್ತ ಬುಖಾರಿ ಹತ್ಯೆ ಆರೋಪಿ ಉಗ್ರ ಅಬು ಹನ್‌ಜಲ್ಲಾ ಅಲಿಯಾಸ್‌ ನವೀದ್ ಜಟ್ ಎನ್‌ಕೌಂಟರ್‌ಗೆ ಬಲಿ

0
292

ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣದ ‍ಪ್ರಮುಖ ಆರೋಪಿ, ಲಷ್ಕರ್–ಎ–ತಯಬಾ ಉಗ್ರ ಅಬು ಹನ್‌ಜಲ್ಲಾ ಅಲಿಯಾಸ್‌ ನವೀದ್ ಜಟ್ ಜಮ್ಮು–ಕಾಶ್ಮೀರದ ಬಡ್‌ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಯ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ.

ಶ್ರೀನಗರ (ಪಿಟಿಐ): ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣದ ‍ಪ್ರಮುಖ ಆರೋಪಿ, ಲಷ್ಕರ್–ಎ–ತಯಬಾ ಉಗ್ರ ಅಬು ಹನ್‌ಜಲ್ಲಾ ಅಲಿಯಾಸ್‌ ನವೀದ್ ಜಟ್ ಜಮ್ಮು–ಕಾಶ್ಮೀರದ ಬಡ್‌ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಯ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ.

ಮೂವರು ಉಗ್ರರು ಅಡಗಿದ್ದ ಮಾಹಿತಿ ಆಧರಿಸಿ ನವೆಂಬರ್ 28 ರ ಬುಧವಾರ ಬೆಳಿಗ್ಗೆ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಉಗ್ರರು ಗುಂಡು ಹಾರಿಸಿದಾಗ ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ನವೀದ್‌ ಮೃತಪಟ್ಟ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಬಡಗಾಮ್‌ನಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಹಿರಿಯ ಪತ್ರಕರ್ತ ಮತ್ತು ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ಶ್ರೀನಗರದ ಅವರ ಕಚೇರಿ ಎದುರು ಜೂನ್‌ನಲ್ಲಿ ಉಗ್ರಗಾಮಿಗಳು ಹತ್ಯೆ ಮಾಡಿದ್ದರು.

ಪಾಕಿಸ್ತಾನಕ್ಕೆ ಮೃತದೇಹ: ನವೀದ್‌ ಜಟ್ ಪಾಕಿಸ್ತಾನದ ಪ್ರಜೆಯಾಗಿದ್ದು, ಆತನ ಮೃತದೇಹವನ್ನು ಇಸ್ಲಾಮಾಬಾದ್‌ಗೆ ತೆಗೆದುಕೊಂಡು ಹೋಗುವಂತೆ ಪಾಕಿಸ್ತಾನದ ಆಡಳಿತಕ್ಕೆ ಮಾಹಿತಿ ನೀಡಲು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಪೊಲೀಸರ ವಶದಿಂದ ಪರಾರಿಯಾಗಿದ್ದ ನವೀದ್‌, ಆರು ಎನ್‌ಕೌಂಟರ್‌ಗಳ  ಸಂದರ್ಭದಲ್ಲೂ ತಪ್ಪಿಸಿಕೊಂಡಿದ್ದ. ಈಗ, ಅಂತಿಮವಾಗಿ ಆತನನ್ನು ಹೊಡೆದುರುಳಿಸಲು ಭದ್ರತಾ ಪಡೆ ಯಶಸ್ವಿಯಾಗಿದೆ.