ಪಟಾಕಿ ಸಮಯ ನಿಗದಿ: ದಕ್ಷಿಣ ರಾಜ್ಯಗಳಿಗೆ ಅಧಿಕಾರ

0
266

ತಮಿಳುನಾಡು ಮತ್ತು ಪುದುಚೇರಿ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ದೀಪಾವಳಿ ಹಬ್ಬದಲ್ಲಿ ಹಗಲು ಹೊತ್ತಿನಲ್ಲೂ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್‌ ಅಕ್ಟೋಬರ್ 30 ರ ಮಂಗಳವಾರ ಅನುಮತಿ ನೀಡಿದೆ.

ನವದೆಹಲಿ: ತಮಿಳುನಾಡು ಮತ್ತು ಪುದುಚೇರಿ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ದೀಪಾವಳಿ ಹಬ್ಬದಲ್ಲಿ ಹಗಲು ಹೊತ್ತಿನಲ್ಲೂ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.

ದೇಶದಾದ್ಯಂತ ದೀಪಾವಳಿಯಂದು ರಾತ್ರಿ 8ರಿಂದ 10ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸುವಂತೆ ಸುಪ್ರೀಂ ಕೋರ್ಟ್ ಈಚೆಗೆ ನಿರ್ಬಂಧ ವಿಧಿಸಿತ್ತು. ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಮತ್ತು ಪಟಾಕಿ ತಯಾರಕರು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರಿದ್ದ ದ್ವಿಸದಸ್ಯ ಪೀಠವು ದಕ್ಷಿಣ ರಾಜ್ಯಗಳಲ್ಲಿ ಮಾತ್ರ ಹಗಲು ಹೊತ್ತಿನಲ್ಲಿ ಪಟಾಕಿ ಸಿಡಿಸಲು ಅನುಮತಿ ನೀಡಿದೆ.

ಆದರೆ, ಎರಡು ತಾಸಿಗಿಂತ ಹೆಚ್ಚು ಹೊತ್ತು ಪಟಾಕಿ ಸಿಡಿಸುವಂತಿಲ್ಲ ಎಂದು ಷರತ್ತು ವಿಧಿಸಿದೆ. ಪಟಾಕಿ ಸಿಡಿಸಲು ಅನುಕೂಲಕರವಾದ ಸಮಯವನ್ನು ಆಯಾ ರಾಜ್ಯಗಳೇ ನಿಗದಿಗೊಳಿಸಬೇಕು ಎಂದೂ ಸಲಹೆ ನೀಡಿದೆ.

ದೀಪಾವಳಿಗೆ ಸಂಬಂಧಿಸಿದಂತೆ ಪ್ರತಿ ರಾಜ್ಯದಲ್ಲೂ ವಿಭಿನ್ನ ಸಂಪ್ರದಾಯ, ಪದ್ಧತಿ, ಆಚರಣೆಗಳು ಜಾರಿಯಲ್ಲಿವೆ. ಉತ್ತರ ಭಾರತದಲ್ಲಿ ರಾತ್ರಿ ದೀಪಾವಳಿ ಆಚರಿಸಿದರೆ, ದಕ್ಷಿಣದಲ್ಲಿ ಅದರ ಮರುದಿನ ಮುಂಜಾನೆ ಆಚರಿಸಲಾಗುತ್ತದೆ ಎಂದು ತಮಿಳುನಾಡು ವಾದ ಮಂಡಿಸಿತು.

ದಕ್ಷಿಣದ ರಾಜ್ಯಗಳಲ್ಲಿ ದೀಪಾವಳಿ ಮರುದಿನ ಮುಂಜಾನೆ ನರಕಾಸುರನ ವಧೆಯ ನೆನಪಿನಲ್ಲಿ ಹಬ್ಬಆಚರಿಸಲಾಗುತ್ತದೆ. ಆದ್ದರಿಂದ ಬೆಳಗಿನ ಜಾವ 4.30ರಿಂದ  6.30 ಗಂಟೆವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡುವಂತೆ ತಮಿಳುನಾಡು ಮನವಿ ಸಲ್ಲಿಸಿತ್ತು.

ಪರಿಸರಸ್ನೇಹಿ ಪಟಾಕಿ ದೆಹಲಿಗೆ ಸೀಮಿತ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಪರಿಸರ ಸ್ನೇಹಿ ಪಟಾಕಿ (ಹಸಿರು ಪಟಾಕಿ) ಬಳಕೆ ಅನ್ವಯಿಸುತ್ತದೆ. ಇಡೀ ದೇಶಕ್ಕೆ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟಪಡಿಸಿದೆ.

ಶಬ್ದ ಮತ್ತು ವಾಯು ಮಾಲಿನ್ಯ ತಡೆಯುವ ಉದ್ದೇಶದಿಂದ ಈ ಆದೇಶ ನೀಡಿದ್ದಾಗಿ ಹೇಳಿದೆ.