ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹ 2 ಕೋಟಿ ದಂಡ : (ಸ್ವಿಫ್ಟ್‌ ನಿಯಮ ಉಲ್ಲಂಘನೆ: ಆರ್‌ಬಿಐ ಕ್ರಮ)

0
390

ಹಣಕಾಸು ವಹಿವಾಟು ಮಾಹಿತಿಯ ವಿನಿಮಯಕ್ಕೆ ಸುರಕ್ಷಿತ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹ 2 ಕೋಟಿ ದಂಡ ವಿಧಿಸಿದೆ.

ನವದೆಹಲಿ (ಪಿಟಿಐ): ಹಣಕಾಸು ವಹಿವಾಟು ಮಾಹಿತಿಯ ವಿನಿಮಯಕ್ಕೆ ಸುರಕ್ಷಿತ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ),  ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ)  2 ಕೋಟಿ ದಂಡ ವಿಧಿಸಿದೆ.

ಜಾಗತಿಕ ಅಂತರ್‌ ಬ್ಯಾಂಕ್‌ ಹಣಕಾಸು ದೂರಸಂಪರ್ಕ ಸಂಸ್ಥೆಯು (ಎಸ್‌ಡಬ್ಲ್ಯುಐಎಫ್‌ಟಿ– ಸ್ವಿಫ್ಟ್‌) ಬ್ಯಾಂಕ್‌ಗಳಲ್ಲಿ ನಡೆಯುವ ಹಣಕಾಸು ವಹಿವಾಟಿನ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಒದಗಿಸುತ್ತದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದಕ್ಕಾಗಿ ಈ ದಂಡ ವಿಧಿಸಿದೆ.

ಈ ರೀತಿ ನಿಯಮ ಉಲ್ಲಂಘಿಸಿರುವ 36 ಬ್ಯಾಂಕ್‌ಗಳಿಗೆ ಆರ್‌ಬಿಐ ಈಗಾಗಲೇ 71 ಕೋಟಿ ದಂಡ ವಿಧಿಸಿದೆ.

ದಂಡ ವಿಧಿಸಿರುವ ಬ್ಯಾಂಕ್‌ಗಳ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ, ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಮತ್ತು ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್‌ ಐಸಿಐಸಿಐ ಬ್ಯಾಂಕ್‌ ಸೇರಿವೆ. ಬ್ಯಾಂಕ್‌ ಆಫ್‌ ಬರೋಡಾ, ಸಿಟಿ ಯೂನಿಯನ್‌ ಬ್ಯಾಂಕ್‌, ಎಚ್‌ಎಸ್‌ಬಿಸಿ ಮತ್ತು ಯೆಸ್‌ ಬ್ಯಾಂಕ್‌ ಸಹ ಸೇರಿವೆ.

ವಹಿವಾಟಿನ ಸುರಕ್ಷತೆಗೆ ಸಂಬಂಧಿಸಿದ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಅಳವಡಿಸಿಕೊಳ್ಳದ ಕಾರಣಕ್ಕೆ ದಂಡ ಪಾವತಿಸಲಾಗಿದೆ ಎಂದು ಕೆಲವು ಬ್ಯಾಂಕ್‌ಗಳು ಷೇರುಪೇಟೆಗೆ ಮಾಹಿತಿ ನೀಡಿವೆ.

ನ್ಯೂನತೆಯ ಕಾರಣಕ್ಕೆ ದಂಡ:   ಹಣಕಾಸು ವಹಿವಾಟು ಮಾಹಿತಿಯ ವಿನಿಮಯಕ್ಕೆ ಸುರಕ್ಷಿತ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿರುವುದಕ್ಕೆ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ನ್ಯೂನತೆಗಳೇ ಕಾರಣ ಎಂದು ‘ಸ್ವಿಫ್ಟ್‌’ ತಿಳಿಸಿದೆ.

‘ಬ್ಯಾಂಕ್‌ಗಳ ಕಾರ್ಯವೈಖರಿ ಮೇಲೆ ನಿಗಾ ಇರಿಸುವುದು ನಮ್ಮ ಕೆಲಸವಲ್ಲ’ ಎಂದು ಹೇಳಿರುವ ‘ಸ್ವಿಫ್ಟ್‌’ನ ಏಷ್ಯಾ ಪೆಸಿಫಿಕ್‌ನ ಸಿಇಒ ಅಲೈನ್‌ ರಯೆಸ್‌, ಬ್ಯಾಂಕ್‌ ನ್ಯೂನತೆಗಳು ಗಂಭೀರ ಸ್ವರೂಪದ್ದಲ್ಲ ಎನ್ನುವ ಬ್ಯಾಂಕ್‌ಗಳ ಧೋರಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

‘ಎಲ್ಲ ಬ್ಯಾಂಕ್‌ಗಳ ಮೇಲೆ ನಿಗಾ ಇಡಲು ನಮ್ಮಿಂದ ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದಾರೆ.