ಪಂಜಾಬ್ ಸರಕಾರ 2019ನೇ ಸಾಲಿನ “ವಿಶ್ವ ಕಬಡ್ಡಿ ಕಪ್’ ಪಂದ್ಯಾವಳಿಯನ್ನು ಆಯೋಜಿಸಲಿದ್ದು, ಮುಂದಿನ ಡಿಸೆಂಬರ್.1 ರಿಂದ 9 ರ ತನಕ ಈ ಕೂಟ ನಡೆಯಲಿದೆ
ಚಂಡೀಗಢ: ಪಂಜಾಬ್ ಸರಕಾರ 2019ನೇ ಸಾಲಿನ “ವಿಶ್ವ ಕಬಡ್ಡಿ ಕಪ್’ ಪಂದ್ಯಾವಳಿಯನ್ನು ಆಯೋಜಿಸಲಿದ್ದು, ಮುಂದಿನ ಡಿಸೆಂಬರ್ 1 ರಿಂದ 9 ರ ತನಕ ಈ ಕೂಟ ನಡೆಯಲಿದೆ ಎಂದು ರಾಜ್ಯ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಹೇಳಿದರು. ಈ ಕೂಟವನ್ನು ಸಿಕ್ಖ್ ಧರ್ಮಗುರು ಗುರುನಾನಕ್ ಅವರಿಗೆ ಅರ್ಪಿಸಲಾಗುವುದು ಎಂದೂ ಅವರು ಹೇಳಿದರು. ಇದು ಗುರುನಾನಕ್ ಅವರ 550ನೇ ಜನ್ಮ ದಿನಾಚರಣೆಯ ವರ್ಷವಾಗಿದೆ.
ಈ ಪಂದ್ಯಾವಳಿಯಲ್ಲಿ ಭಾರತ ಸೇರಿದಂತೆ 9 ದೇಶಗಳು ಪಾಲ್ಗೊಳ್ಳಲಿವೆ. ಉಳಿದ ತಂಡಗಳೆಂದರೆ ಅಮೆರಿಕ, ಆಸ್ಟ್ರೇಲಿಯ, ಇಂಗ್ಲೆಂಡ್, ಶ್ರೀಲಂಕಾ, ಕೀನ್ಯಾ, ನ್ಯೂಜಿಲ್ಯಾಂಡ್, ಪಾಕಿಸ್ಥಾನ ಮತ್ತು ಕೆನಡಾ. ಇವುಗಳಲ್ಲಿ ಪಾಕಿಸ್ಥಾನ ಮತ್ತು ಕೆನಡಾಕ್ಕೆ ಕೇಂದ್ರ ಸರಕಾರದಿಂದ ನಿರಾಕ್ಷೇಪಣಾ ಪತ್ರ ಲಭಿಸಬೇಕಷ್ಟೇ.
ಡಿಸೆಂಬರ್ 1 ರಂದು ಸುಲ್ತಾನ್ಪುರ್ ಲೋಧಿಯ “ಗುರುನಾನಕ್ ಸ್ಟೇಡಿಯಂ’ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಂದು 4 ಪಂದ್ಯಗಳನ್ನು ಆಡಲಾಗುವುದು. ಡೇರ ಬಾಬಾ ನಾನಕ್ನ “ಶಹೀದ್ ಭಗತ್ ಸಿಂಗ್ ನ್ಪೋರ್ಟ್ಸ್ ಸ್ಟೇಡಿಯಂ’ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಮೃತಸರ, ಫಿರೋಜ್ಪುರ್, ಪಟಿಯಾಲಾದಲ್ಲಿ ಲೀಗ್ ಪಂದ್ಯಗಳು, ಶ್ರೀ ಆನಂದ್ಪುರ್ ಸಾಹಿಬ್ನಲ್ಲಿ ಸೆಮಿಫೈನಲ್ ಪಂದ್ಯಗಳನ್ನು ಆಡಲಾಗುವುದು.