ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳು ಮಾತ್ರ ಇರಬೇಕೆಂದ ಸುಪ್ರೀಂ ಕೋರ್ಟ್

0
589

ಒಬ್ಬ ವ್ಯಕ್ತಿಗೆ ಮೂರನೇ ಮಗು ಹುಟ್ಟಿದ ಬಳಿಕ ಅವರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಪಂಚಾಯತ್‌ನ ಸರಪಂಚ್‌ ಅಥವಾ ಸದಸ್ಯನಾಗಲು ಅರ್ಹನಲ್ಲ ಎಂದು ಸುಪ್ರೀಂಕೋರ್ಟ್‌ ಮಹತ್ತರ ತೀರ್ಪು ನೀಡಿದೆ.

ಹೊಸದಿಲ್ಲಿ: ಒಬ್ಬ ವ್ಯಕ್ತಿಗೆ ಮೂರನೇ ಮಗು ಹುಟ್ಟಿದ ಬಳಿಕ ಅವರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಪಂಚಾಯತ್‌ನ ಸರಪಂಚ್‌ ಅಥವಾ ಸದಸ್ಯನಾಗಲು ಅರ್ಹನಲ್ಲ ಎಂದುಸುಪ್ರೀಂಕೋರ್ಟ್‌ ಮಹತ್ತರ ತೀರ್ಪು ನೀಡಿದೆ. ಅಲ್ಲದೆ, ತನ್ನ ಮೂರನೇ ಮಗುವನ್ನು ಇತರರಿಗೆ ದತ್ತು ನೀಡಿದರೂ ಸಹ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹನಲ್ಲ ಎಂದೇ ತಿಳಿಸಿದೆ. 

ಒಡಿಶಾದ ಬುಡಕಟ್ಟು ಜನಾಂಗದ ಸರಪಂಚ್‌ ಒಬ್ಬ ತನ್ನ ಮೂರನೇ ಮಗುವನ್ನು ಹೆತ್ತ ಬಳಿಕ ಇತರರಿಗೆ ದತ್ತು ನೀಡಿ ಅನರ್ಹನಾಗುವುದನ್ನು ತಪ್ಪಿಸಿಕೊಳ್ಳಲು ಹೋಗಲು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌ ಹಾಗೂ ಕೆ.ಎಂ.ಜೋಸೆಫ್‌ ನೇತೃತ್ವದ ತ್ರಿಸದಸ್ಯ ಪೀಠ ಪ್ರತಿಕ್ರಿಯೆ ನೀಡಿದ್ದು, ಪಂಚಾಯತ್‌ ಕಾಯ್ದೆ ಪ್ರಕಾರ ಮೂರು ಮಕ್ಕಳಿದ್ದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಾಗಿಲ್ಲ ಅಥವಾ ಪಂಚಾಯತ್‌ನಲ್ಲಿ ಯಾವುದೇ ಹುದ್ದೆ ಹೊಂದುವ ಹಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ. 

ಮಕ್ಕಳನ್ನು ದತ್ತು ನೀಡುವ ಮೂಲಕ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸಬಹುದು ಎಂದು ಹಿಂದೂ ದತ್ತು ಪ್ರಕ್ರಿಯೆ ಹಾಗೂ ನಿರ್ವಹಣೆ ಕಾಯ್ದೆ ಹೇಳುತ್ತದೆ. ಆದರೆ, ಕುಟುಂಬದಲ್ಲಿ ಜನನದ ಸಂಖ್ಯೆ ಕಡಿಮೆ ಮಾಡಬೇಕು ಎಂಬುದು ಶಾಸನದ ಉದ್ದೇಶ. ಹೀಗಾಗಿ ಅದರ ಲಾಭ ಪಡೆದುಕೊಂಡು ಮೂರು ಅಥವಾ ಹೆಚ್ಚು ಮಕ್ಕಳಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. 

ಒಡಿಶಾದ ಮೀನಾಸಿಂಗ್ ಮಝಿ ಎಂಬ ಅರ್ಜಿದಾರ ತನ್ನನ್ನು ನುವಾಪಾಡಾ ಸರಪಂಚ್ ಸ್ಥಾನದಿಂದ ಅನರ್ಹಗೊಳಿಸಿದ ಒರಿಸ್ಸಾ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತನಗೆ 1995, 1998ರಲ್ಲಿ ಎರಡು ಮಕ್ಕಳಾದವು. ಬಳಿಕ, 2002ರ ಫೆಬ್ರವರಿಯಲ್ಲಿ ಸರಪಂಚ್‌ ಆಗಿ ಆಯ್ಕೆಯಾದೆ. ಬಳಿಕ, ಅದೇ ವರ್ಷದ ಆಗಸ್ಟ್‌ ತಿಂಗಳಲ್ಲಿ ಮೂರನೇ ಮಗು ಹುಟ್ಟಿದ್ದಕ್ಕೆ ತನ್ನನ್ನು ಹುದ್ದೆಯಿಂದ ಅನರ್ಹಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ, ಸೆಪ್ಟೆಂಬರ್ 1999ರಲ್ಲೇ ಮೊದಲ ಮಗುವನ್ನು ದತ್ತು ನೀಡಲಾಗಿದೆ. ಹೀಗಾಗಿ, ಹಿಂದೂ ದತ್ತು ಪ್ರಕ್ರಿಯೆ ಹಾಗೂ ನಿರ್ವಹಣಾ ಕಾಯ್ದೆ ಪ್ರಕಾರ ದತ್ತು ನೀಡಿದ ಬಳಿಕ ಆ ಮಗು ಅವರ ಕುಟುಂಬಕ್ಕೆ ಸೇರುವುದಿಲ್ಲ ಎಂದು ಮೀನಾಸಿಂಗ್ ಪರ ವಕೀಲ ವಾದ ಮಾಡಿದ್ದರು. 

ಆದರೆ ಇದನ್ನೊಪ್ಪದ ಸುಪ್ರೀಂಕೋರ್ಟ್, ”ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಎರಡು ಮಕ್ಕಳು ಮಾತ್ರ ಇರಬೇಕೆಂದು ಈ ರೀತಿ ನಿಯಮ ಮಾಡಲಾಗಿದೆ” ಎಂದು ಅಭಿಪ್ರಾಯಪಟ್ಟಿದೆ.