ನೌಕಾಪಡೆಗೆ ಆನೆಬಲ ಒದಗಿಸುವ ಕಲಾಂ-4 ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆಗೆ ಸಜ್ಜು

0
21

ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಮಧ್ಯಮ ವ್ಯಾಪ್ತಿಯ ಕೆ-4 ಅಥವಾ ಕಲಾಂ-4 ಕ್ಷಿಪಣಿ ಪರೀಕ್ಷೆಯನ್ನು ಭಾರತವು ನವೆಂಬರ್ 7 ರ ಶುಕ್ರವಾರ ನಡೆಸಲಿದೆ.

ಭುವನೇಶ್ವರ್: ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಮಧ್ಯಮ ವ್ಯಾಪ್ತಿಯ ಕೆ-4 ಅಥವಾ ಕಲಾಂ-4 ಕ್ಷಿಪಣಿ ಪರೀಕ್ಷೆಯನ್ನು ಭಾರತವು ನವೆಂಬರ್ 7 ರ ಶುಕ್ರವಾರ ನಡೆಸಲಿದೆ.

ಜಲಾಂತರ್ಗಾಮಿಗಳ ಮೂಲಕ ಉಡಾಯಿಸಬಹುದಾದ ಕ್ಷಿಪಣಿ ಇದಾಗಿದ್ದು, ಆಂಧ್ರ ಪ್ರದೇಶದ ವಿಶಾಖಪಟ್ಟಣಂ ತೀರಪ್ರದೇಶದಲ್ಲಿ ಜಲಾಂತರ್ಗಾಮಿ ಮೂಲಕ ಪರೀಕ್ಷೆ ನಡೆಯಲಿದೆ.

ಕೆ-4 ಅಥವಾ ಕಲಾಂ-4 ಬ್ಯಾಲಿಸ್ಟಿಕ್ ಮಿಸೈಲ್ ಆಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಭಿವೃದ್ಧಿಪಡಿಸಿದೆ. 3,500 ಕಿಲೋ ಮೀಟರ್ ವ್ಯಾಪ್ತಿಯನ್ನು ಕ್ಷಿಪಣಿ ಹೊಂದಿದೆ. ಅರಿಹಂತ್ ದರ್ಜೆಯ ನ್ಯೂಕ್ಲಿಯರ್ ಜಲಾಂತರ್ಗಾಮಿಗಳಲ್ಲಿ ಕೆ-4 ಕ್ಷಿಪಣಿಗಳನ್ನು ಬಳಸಲಾಗುತ್ತದೆ. ಕೆ-4 ಕ್ಷಿಪಣಿ ಸೇವೆಗೆ ಸಿದ್ಧವಾದರೆ ಭಾರತದ ನೌಕಾಪಡೆಗೆ ಆನೆ ಬಲ ಒಂದಂತಾಗಲಿದೆ.

ಪರೀಕ್ಷೆ ಸಮಯದಲ್ಲಿ ಕ್ಷಿಪಣಿಯಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸುಧಾರಿತ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್​ಡಿಒ ಪರೀಕ್ಷಿಸಲಿದೆ.

ಡಿಆರ್​​ಡಿಒ ಜಲಾಂತರ್ಗಾಮಿಗಳಿಂದ ಪ್ರಯೋಗಿಸುವ ಎರಡು ಮಾದರಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಅವುಗಳಲ್ಲಿ ಕೆ-4 ಕ್ಷಿಪಣಿ ಒಂದು. ಮತ್ತೊಂದು ಬಿಒ-5 ಕ್ಷಿಪಣಿ ಅಭಿವೃದ್ಧಿ ಹಂತದಲ್ಲಿದೆ. ಇದು ಅಲ್ಪ ವ್ಯಾಪ್ತಿಯದ್ದಾಗಿದ್ದು, 700 ಕಿಮೀ ವ್ಯಾಪ್ತಿಯ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರಲಿದೆ.

ಕಳೆದ ತಿಂಗಳು ಕೆ-4 ಕ್ಷಿಪಣಿಯನ್ನು ಪರೀಕ್ಷಿಸಲು ಉದ್ದೇಶಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು.