ನೌಕಾಪಡೆಗೆ ಅತ್ಯಾಧುನಿಕ ಐಎನ್​ಎಸ್​ ಖಂಡೇರಿ ಬಲ: ವಿಶೇಷತೆಗಳೇನು ಗೊತ್ತಾ ?

0
9

ಸ್ವದೇಶಿ ನಿರ್ಮಿತ ಸ್ಕಾರ್ಪಿಯನ್ ದರ್ಜೆಯ ಜಲಂತರ್ಗಾಮಿ ಐಎನ್​ಎಸ್​ ಖಂಡೇರಿ ಸೆಪ್ಟೆಂಬರ್ 28 ರ ಶನಿವಾರ ನೌಕಾ ಪಡೆ ಸೇವೆಗೆ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡೇರಿಯನ್ನು ನೌಕಾಪಡೆ ಸೇವೆಗೆ ಸಮರ್ಪಿಸಿದರು.

ಮುಂಬೈ: ಸ್ವದೇಶಿ ನಿರ್ಮಿತ ಸ್ಕಾರ್ಪಿಯನ್ ದರ್ಜೆಯ ಜಲಂತರ್ಗಾಮಿ ಐಎನ್​ಎಸ್​ ಖಂಡೇರಿ ಸೆಪ್ಟೆಂಬರ್ 28 ರ ಶನಿವಾರ ನೌಕಾ ಪಡೆ ಸೇವೆಗೆ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡೇರಿಯನ್ನು ನೌಕಾಪಡೆ ಸೇವೆಗೆ ಸಮರ್ಪಿಸಿದರು. 

ಐಎನ್​ಎಸ್​​ ಖಂಡೇರಿ, ಡೀಸೆಲ್ ಎಲೆಕ್ಟ್ರಿಕ್ ಚಾಲಿತ ಸಬ್​ಮರೀನ್ ಆಗಿದ್ದು, ಮಜಗಾವ್ ಹಡಗುಗಟ್ಟೆಯಲ್ಲಿ ನಿರ್ಮಾಣವಾಗಿದೆ. ಎರಡುವರೆ ವರ್ಷ ಕಠಿಣ ಪರೀಕ್ಷೆಗಳಿಗೆ ಒಳಪಟ್ಟಿದೆ. ಅರಬ್ಬಿ ಸಮುದ್ರದಾಳದ ಪ್ರದೇಶದಲ್ಲಿ ಕಂಡುಬರುವ ಕನ್ನೇರಿ ಮೀನಿನಿಂದ ಸ್ಪೂರ್ತಿ ಪಡೆದು ಈ ಜಲಂತರ್ಗಾಮಿಗೆ ಈ ಹೆಸರು ನೀಡಲಾಗಿದೆ.

ಸಂಪೂರ್ಣ ಸ್ವದೇಶದಲ್ಲಿ ನಿರ್ಮಾಣವಾಗಿರುವ ಖಂಡೇರಿ, ವಿಶ್ವದರ್ಜೆಯ ತಂತ್ರಜ್ಞಾನ ಹೊಂದಿದೆ. ಸಮುದ್ರದಾಳದಲ್ಲಿ ಅತ್ಯಂತ ಕಡಿಮೆ ಶಬ್ದ ಉತ್ಪಾದಿಸುತ್ತದೆ. ವಿಶ್ವದ ಅತ್ಯಂತ ಪ್ರಬಲ ಸಬ್​ಮರೀನ್​​ಗಳಿಗೆ ಖಂಡೇರಿಯನ್ನು ಹೋಲಿಸಬಹುದು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಿಪಣಿಗಳು ಹಾಗೂ ಟಾರ್ಪೆಡೋಗಳನ್ನು ಹೊತ್ತೊಯ್ಯುವ ಖಂಡೇರಿ, ಶತೃಗಳ ನಿರ್ದೇಶಿತ ಸ್ಥಾವರಗಳ ಮೇಲೆ ದಾಳಿ ನಡೆಸುತ್ತದೆ. ಸಬ್​ಮರೀನ್​ನಲ್ಲಿ ಅಳವಡಿಸಿರುವ ಅತ್ಯಾಧುನಿಕ ಸೋನಾರ್​ ವ್ಯವಸ್ಥೆ ಸುದೂರದಲ್ಲಿರುವ ಶತ್ರುಗಳನ್ನು ಪತ್ತೆಹಚ್ಚುತ್ತವೆ. ಹಾಗಾಗಿ ಶತ್ರುಗಳ ಕಣ್ಣಿಗೆ ಬೀಳದೆ ದಾಳಿ ನಡೆಸುವ ಸಾಮರ್ಥ್ಯ ಖಂಡೇರಿಯದ್ದಾಗಿದೆ.

67.5 ಮೀಟರ್ ಉದ್ದ ಹಾಗೂ 12.3 ಮೀಟರ್ ಎತ್ತರವಿದ್ದು, 60 ಸಿಬ್ಬಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಪಡೆದಿದೆ. ಅತ್ಯಾಧುನಿಕ ಸೆನ್ಸರ್​ಗಳು ಹಾಗೂ ತಂತ್ರಜ್ಞಾನ ಅಳವಡಿಸಿರುವುದರಿಂದ 36 ಸಿಬ್ಬಂದಿ ಜಲಾಂತರ್ಗಾಮಿಯನ್ನು ನಿರ್ವಹಿಸಬಹುದು. ಹಾಗಾಗಿ ಸಬ್​ಮರೀನ್​ನಲ್ಲಿ ಆಮ್ಲಜನಕ ಪ್ರಮಾಣ ಅಧಿಕವಾಗಿರಲಿದ್ದು, ದೀರ್ಘಕಾಲ ಸಮುದ್ರದಾಳದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.

ಪ್ರಾಜೆಕ್ಟ್​ 75 ಅಡಿಯಲ್ಲಿ ಸಬ್​ಮರೀನ್ ನಿರ್ಮಾಣವಾಗಿದ್ದು, 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ಇಂತಹ ಆರು ಸಬ್​ಮರೀನ್​ಗಳನ್ನು ಭಾರತ ನಿರ್ಮಿಸುತ್ತಿದೆ. ಖಂಡೇರಿ ಈ ಮಾದರಿಯಲ್ಲಿ ಎರಡನೇಯದ್ದಾಗಿದ್ದು, 2017 ರಲ್ಲಿ ಈ ದರ್ಜೆಯ ಐಎನ್​ಎಸ್​ ಕಲ್ವರಿ ನೌಕಾಪಡೆ ಸೇರಿದೆ.