ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 16 ವರ್ಷದ ಬಾಲಕಿ ಗ್ರೆಟಾ ತಂಬರ್ಗ್​ !

0
781

ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆ ವಿರುದ್ಧ ಆಂದೋಲನ ನಡೆಸುತ್ತಿರುವ 16 ವರ್ಷದ ಬಾಲಕಿ ಗ್ರೆಟಾ ತಂಬರ್ಗ್​ ಅವರನ್ನು ಪ್ರಸಕ್ತ ವರ್ಷದ ನೋಬೆಲ್​ ಶಾಂತಿ ಪ್ರಶಸ್ತಿಗೆ ನಾರ್ವೇ ಸಂಸತ್ತಿನ ಸದಸ್ಯರು ನಾಮನಿರ್ದೇಶನ ಮಾಡಿದ್ದಾರೆ.

ಸ್ವೀಡನ್​: ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆ ವಿರುದ್ಧ ಆಂದೋಲನ ನಡೆಸುತ್ತಿರುವ 16 ವರ್ಷದ ಬಾಲಕಿ ಗ್ರೆಟಾ ತಂಬರ್ಗ್​ ಅವರನ್ನು ಪ್ರಸಕ್ತ ವರ್ಷದ ನೋಬೆಲ್​ ಶಾಂತಿ ಪ್ರಶಸ್ತಿಗೆ ನಾರ್ವೇ ಸಂಸತ್ತಿನ ಸದಸ್ಯರು ನಾಮನಿರ್ದೇಶನ ಮಾಡಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ವಿರುದ್ಧ ಗ್ರೇಟಾ 2018ರಿಂದ ಆಂದೋಲನವನ್ನೇ ಶುರು ಮಾಡಿದ್ದಾರೆ. ಶಾಲೆಗೆ ತೆರಳದೆ ಸ್ವೀಡನ್​ ಸಂಸತ್ತಿನ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ಹವಾಮಾನ ವೈಪರೀತ್ಯ ವಿರುದ್ಧ ಜಾಗೃತಿ ಮೂಡಿಸಲು ಎಲ್ಲರೂ ಒಟ್ಟಾಗುವಂತೆ ಕರೆ ನೀಡಿದ್ದಳು.

ಈ ಬಗ್ಗೆ ಹೇಳಿಕೆ ನೀಡಿರುವ ನಾರ್ವೆ ಸಂಸದ ಫ್ರೆಡಿ ಆಂಡ್ರೆ, ಹವಾಮಾನ್ಯ ವೈಪರೀತ್ಯ ತಡೆಯದಿದ್ದರೆ ಯುದ್ಧ, ಸಂಘರ್ಷಗಳೂ ಉಂಟಾಗುತ್ತವೆ. ಇದರಿಂದ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತದೆ. ಇಂಥ ಜಾಗತಿಕ ಸಮಸ್ಯೆ ವಿರುದ್ಧ ಗ್ರೆಟಾ ಹೋರಾಟಕ್ಕೆ ನಿಂತಿದ್ದಾರೆ. ಇದು ಶಾಂತಿ ಸ್ಥಾಪನೆಗೆ ಬಹುದೊಡ್ಡ ಕೊಡುಗೆ. ಹಾಗಾಗಿ ಅವಳ ಹೆಸರನ್ನು ನಾಮನಿರ್ದೇಶನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ತನ್ನ ಹೆಸರನ್ನು ನೊಬೆಲ್​ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಕ್ಕೆ ಟ್ವೀಟ್​ ಮಾಡಿ ಸಂತಸ ವ್ಯಕ್ತಪಡಿಸಿರುವ ಗ್ರೆಟಾ ತಂಬರ್ಗ್​, ಈ ನಾಮನಿರ್ದೇಶನಕ್ಕಾಗಿ ಗೌರವ ಸಲ್ಲಿಸುತ್ತೇನೆ ಮತ್ತು ಅತ್ಯಂತ ಕೃತಜ್ಞಳಾಗಿರುತ್ತೇನೆ ಎಂದಿದ್ದಾರೆ.

ಗ್ರೆಟಾ ನಿಜಕ್ಕೂ ಗ್ರೇಟ್​…

2018ರ ಆಗಸ್ಟ್​ನಲ್ಲಿ ಪ್ರಥಮ ಬಾರಿಗೆ ಹವಾಮಾನ ವೈಪರೀತ್ಯದ ವಿರುದ್ಧ ಮುಷ್ಕರ ಪ್ರಾರಂಭಿಸಿದವಳು ಇಂದಿಗೂ ಪ್ರತಿ ಶುಕ್ರವಾರ ತನ್ನ ಆಂದೋಲನದಲ್ಲಿ ಭಾಗಿಯಾಗುತ್ತಾಳೆ. FridaysForFuture ಎಂಬ ಹ್ಯಾಷ್​ಟ್ಯಾಗ್​ನಡಿ ಈ ಅಭಿಯಾನ ಹಮ್ಮಿಕೊಂಡಿದ್ದು, ಅಂದು ಶಾಲೆಗೆ ರಜಾ ಹಾಕಿ ಹೋರಾಟಕ್ಕೆ ಇಳಿಯುತ್ತಾಳೆ. ಇದನ್ನು ನೋಡಿದ ಜರ್ಮನಿ, ಯುಕೆ, ಫ್ರಾನ್ಸ್​, ಆಸ್ಟ್ರೇಲಿಯಾ, ಜಪಾನ್​ ದೇಶಗಳೂ ಸಾಥ್​ ನೀಡಿದ್ದು ಅಲ್ಲಿನ ಜನರೂ ಕೂಡ ಶುಕ್ರವಾರ ಆಂದೋಲನ ನಡೆಸುತ್ತಾರೆ.

ಪೋಲ್ಯಾಂಡ್​ನಲ್ಲಿ ಡಿಸೆಂಬರ್​ನಲ್ಲಿ ನಡೆದ ಯುಎನ್​ ಕ್ಲೈಮೇಟ್​ ಸಮ್ಮೇಳನದಲ್ಲಿ ಹಾಗೂ ಜನವರಿಯಲ್ಲಿ ಡವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಇದೇ ವಿಚಾರವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ.

ತನ್ನ ಹೋರಾಟದ ಬಗ್ಗೆ ಮಾತನಾಡುವ ಆಕೆ, ಹವಾಮಾನ ವಿಷಮ ಸ್ಥಿತಿ, ತಾಪಮಾನ ಏರಿಕೆ ಜಗತ್ತಿನ ಅತಿಮುಖ್ಯ ವಿಚಾರ. ನನಗೆ ಭಯವಾಗುತ್ತದೆ. ಸುಮ್ಮನೆ ಕುಳಿತುಕೊಳ್ಳುವುದರಿಂದ ಏನೂ ಆಗುವುದಿಲ್ಲ. ನಾನು ಹೋರಾಟ ಮಾಡುತ್ತೇನೆ. ನನ್ನ ತಂದೆ ತಾಯಿಯ ಸಹಕಾರವೂ ಇದೆ ಎಂದು ಹೇಳುತ್ತಾಳೆ.

ಇವಳ ಹೋರಾಟಕ್ಕೆ ಸದ್ಯ 100ಕ್ಕೂ ಹೆಚ್ಚು ದೇಶಗಳು ಸಾಥ್​ ನೀಡಿವೆ. ಒಂದೊಮ್ಮೆ ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತಳಾದರೆ ಆ ಪ್ರಶಸ್ತಿ ಪಡೆದ ವಿಶ್ವದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಲಿದ್ದಾಳೆ. ಸದ್ಯ 17 ವರ್ಷದ ಪಾಕಿಸ್ತಾನಿ ಹೋರಾಟಗಾರ್ತಿ ಮಲಾಲಾ ಯೂಸಫ್​ ಝಾಯಿ ಅತಿ ಕಿರಿಯ ವಯಸ್ಸಿನಲ್ಲಿ ನೊಬೆಲ್​ ಪ್ರಶಸ್ತಿ ಪುರಸ್ಕೃತಳಾಗಿದ್ದಾಳೆ.