ನೊವಾಕ್‌ ಜೊಕೊವಿಕ್‌ ಪ್ರಶಸ್ತಿಗಳ ಮುಕುಟಕ್ಕೆ “ಮ್ಯಾಡ್ರಿಡ್‌ ಓಪನ್‌ ಗರಿ”

0
15

ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಮೇ 11 ರ ಶನಿವಾರ ತಡರಾತ್ರಿ ನಡೆದ ಮ್ಯಾಡ್ರಿಡ್‌ ಓಪನ್‌ ಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ 3ನೇ ಬಾರಿಗೆ ಚಾಂಪಿಯನ್‌ ಆಗಿದ್ದಾರೆ. ವಿಶ್ವದ ನಂ.1 ಆಟಗಾರ ಮ್ಯಾಡ್ರಿಡ್‌ನ ಮಣ್ಣಿನ ಅಂಗಣದಲ್ಲಿ ಇದಕ್ಕೂ ಮೊದಲು 2011 ಮತ್ತು 2016ರಲ್ಲಿ ಚಾಂಪಿಯನ್‌ ಆಗಿದ್ದರು.

ಮ್ಯಾಡ್ರಿಡ್‌: ಸರ್ಬಿಯಾದ ನೊವಾಕ್‌ ಜೊಕೊವಿಕ್‌  ಮೇ 11 ರ ಶನಿವಾರ ತಡರಾತ್ರಿ ನಡೆದ ಮ್ಯಾಡ್ರಿಡ್‌ ಓಪನ್‌ ಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ 3ನೇ ಬಾರಿಗೆ ಚಾಂಪಿಯನ್‌ ಆಗಿದ್ದಾರೆ. ವಿಶ್ವದ ನಂ.1 ಆಟಗಾರ ಮ್ಯಾಡ್ರಿಡ್‌ನ ಮಣ್ಣಿನ ಅಂಗಣದಲ್ಲಿ ಇದಕ್ಕೂ ಮೊದಲು 2011 ಮತ್ತು 2016ರಲ್ಲಿ ಚಾಂಪಿಯನ್‌ ಆಗಿದ್ದರು. 

31 ವರ್ಷದ ಜೊಕೊವಿಕ್‌ 33ನೇ ಎಟಿಪಿ ಮಾಸ್ಟರ್ಸ್‌ 1000 ಕಿರೀಟ ಧರಿಸುವುದರೊಂದಿಗೆ ವಿಶ್ವದ 2ನೇ ಶ್ರೇಯಾಂಕದ ಆಟಗಾರ ರಾಫೆಲ್‌ ನಡಾಲ್‌ ದಾಖಲೆ ಸರಿಗಟ್ಟಿದ್ದಾರೆ. ಈ ವರ್ಷದ ಆರಂಭದಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗೆ ಭಾಜನರಾಗಿದ್ದ ಜೊಕೊವಿಕ್‌ ಪಾಲಿಗಿದು ವರ್ಷದ 2ನೇ ಪ್ರಶಸ್ತಿ. 2003ರಲ್ಲಿ ಟೆನಿಸ್‌ ವೃತ್ತಿಜೀವನ ಆರಂಭಿಸಿದ್ದ ಸರ್ಬಿಯಾ ಆಟಗಾರ ಇಲ್ಲಿಯ ತನಕ ಒಟ್ಟು 74 ಪ್ರಶಸ್ತಿ ಜಯಿಸಿದ್ದಾರೆ. 

ಶನಿವಾರ ಪಂದ್ಯ ಮುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೊಕೊವಿಕ್‌, ಮ್ಯಾಡ್ರಿಡ್‌ ಓಪನ್‌ ಗೆಲುವಿನಿಂದ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌(ರೋಲ್ಯಾಂಡ್‌ ಗ್ಯಾರೋಸ್‌)ಗೆ ಸ್ಫೂರ್ತಿ ದೊರೆತಂತಾಗಿದೆ ಎಂದು ಹೇಳಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ ಟೂರ್ನಿ ಮೇ 26ರಂದು ಆರಂಭಗೊಳ್ಳಲಿದೆ. 

ನಡಾಲ್‌ ವಿರುದ್ಧ ಸೆಮಿಫೈನಲ್‌ನಲ್ಲಿ ಗೆದ್ದ ಬಳಿಕ ಬಳಲಿದಂತೆ ಕಂಡುಬಂದ 20 ವರ್ಷದ ಸಿಟ್ಸಿಪಾಸ್‌ ಪ್ರಶಸ್ತಿ ಸುತ್ತಿನಲ್ಲಿ ಜೊಕೊವಿಕ್‌ಗೆ ಸುಲಭದಲ್ಲಿ ಶರಣಾದರು. ಉಭಯ ಆಟಗಾರರ ನಡುವೆ ನಡೆದ 2ನೇ ಮುಖಾಮುಖಿ ಇದು. ಕೆನಡಾದಲ್ಲಿ ನಡೆದ ಎಟಿಪಿ ಮಾಸ್ಟರ್ಸ್‌ 1000 ಟೂರ್ನಿಯ ಅಂತಿಮ 16ರ ಸುತ್ತಿನ ಹಣಾಹಣಿಯಲ್ಲಿ ಜೊಕೊವಿಕ್‌ ಅವರನ್ನು ಸೋಲಿಸಿದ್ದರು.