ನೊಬೆಲ್‌ ಪ್ರಶಸ್ತಿ ಮೊತ್ತ ಹೆಚ್ಚಳ

0
22

ಪ್ರಸಕ್ತ 2017 ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ನೊಬೆಲ್‌ ಪ್ರತಿಷ್ಠಾನ ಸೋಮವಾರ ತಿಳಿಸಿದೆ.

ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ನೊಬೆಲ್‌ ಪ್ರತಿಷ್ಠಾನ ಸೋಮವಾರ ತಿಳಿಸಿದೆ. ಇದರ ಅನ್ವಯ, ಪ್ರಶಸ್ತಿ ಪುರಸ್ಕೃತರಿಗೆ 10 ಲಕ್ಷ ಡಾಲರ್‌ಗೂ ಹೆಚ್ಚು ಹಣ (ಸುಮಾರು ₹ 6.54 ಕೋಟಿ) ದೊರೆಯಲಿದೆ. 2017ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳ ಘೋಷಣೆಗೆ ಇನ್ನು ಒಂದು ವಾರ ಬಾಕಿ ಇರುವಾಗ ಈ ಘೋಷಣೆ ಹೊರಬಿದ್ದಿದೆ.

‘ಸೆಪ್ಟೆಂಬರ್‌ 14 ರಂದು ನಡೆದ ನೊಬೆಲ್‌ ಪ್ರತಿಷ್ಠಾನದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಶಸ್ತಿ ಮೊತ್ತ ಹೆಚ್ಚಿಸುವ ಕುರಿತು ತೀರ್ಮಾನಿಸಲಾಯಿತು’ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

2012 ರಲ್ಲಿ ಪ್ರಶಸ್ತಿಗಳ ಮೊತ್ತವನ್ನು ಶೇ 20ರಷ್ಟು ಕಡಿತ ಮಾಡಲಾಗಿತ್ತು. ಪ್ರತಿಷ್ಠಾನದ ಮೇಲಿನ ಹಣಕಾಸು ಹೊರೆಯನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿತ್ತು.

ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿಯನ್ನು ಮೊದಲು ಘೋಷಣೆ ಮಾಡಲಾಗುತ್ತದೆ. ಅದರಂತೆ, ಅಕ್ಟೋಬರ್‌ 2ರಂದು ಈ ಪ್ರಶಸ್ತಿ ಪುರಸ್ಕೃತರ ಹೆಸರು ಹೊರಬೀಳಲಿದೆ. ನಂತರದ ಎರಡು ದಿನಗಳಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕ್ಷೇತ್ರಗಳ ಪ್ರಶಸ್ತಿ ಹಾಗೂ 6ರಂದು ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾಗಲಿದೆ. ಸಾಹಿತ್ಯ ಕ್ಷೇತ್ರದ ಪ್ರಶಸ್ತಿ ಘೋಷಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.