ನೈರುತ್ಯ ರೈಲ್ವೆಗೆ ಸುರಕ್ಷತಾ ಪ್ರಶಸ್ತಿ

0
19

ಅತ್ಯುತ್ತಮ ಸೇವೆ ಮತ್ತು ಸುರಕ್ಷತೆಗಾಗಿ ರೈಲ್ವೆ ಸಚಿವಾಲಯ ನೀಡುವ 2017–18ನೇ ಸಾಲಿನ ಸುರಕ್ಷತಾ (ಸೇಫ್ಟಿ ಶೀಲ್ಡ್‌) ಪ್ರಶಸ್ತಿಗೆ ನೈರುತ್ಯ ರೈಲ್ವೆ ಪಾತ್ರವಾಗಿದೆ.

ಹುಬ್ಬಳ್ಳಿ: ಅತ್ಯುತ್ತಮ ಸೇವೆ ಮತ್ತು ಸುರಕ್ಷತೆಗಾಗಿ ರೈಲ್ವೆ ಸಚಿವಾಲಯ ನೀಡುವ 2017–18ನೇ ಸಾಲಿನ ಸುರಕ್ಷತಾ (ಸೇಫ್ಟಿ ಶೀಲ್ಡ್‌) ಪ್ರಶಸ್ತಿಗೆ ನೈರುತ್ಯ ರೈಲ್ವೆ ಪಾತ್ರವಾಗಿದೆ.

ಅಪಘಾತಗಳ ಸಂಖ್ಯೆ ಇಳಿಮುಖ, ಹಳಿ ನವೀಕರಣ ಪ್ರಕ್ರಿಯೆಯ ಪ್ರಗತಿ, ಕಾವಲುಗಾರರಹಿತ ಲೆವೆಲ್ ಕ್ರಾಸಿಂಗ್ ಗೇಟುಗಳು, ಹಳಿ ಸುರಕ್ಷಾ ಕ್ರಮ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ನೈರುತ್ಯ ರೈಲ್ವೆಯು ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ, ಒಟ್ಟು 17 ವಲಯಗಳನ್ನು ಹಿಂದಿಕ್ಕಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದೆ.

ಭೋಪಾಲದಲ್ಲಿ ಏ.15 ರಂದು ನಡೆಯುವ ರೈಲ್ವೆ ಸಪ್ತಾಹ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಂಘಟಿತ ಯತ್ನಕ್ಕೆ ಸಿಕ್ಕ ಫಲ: ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ ನೈರುತ್ಯ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಗುಪ್ತಾ, ‘ನೈರುತ್ಯ ರೈಲ್ವೆವಲಯದಲ್ಲಿ ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ. ಪ್ರಶಸ್ತಿಯು ನಮ್ಮ ವಲಯ ಹೊಂದಿರುವ ಮೂಲ ಸೌಕರ್ಯ, ರೈಲುಗಳ ಕಾರ್ಯಾಚರಣೆ ಹಾಗೂ ಸಿಬ್ಬಂದಿಯ ಸಂಘಟಿತ ಶ್ರಮಕ್ಕೆ ಸಿಕ್ಕ ಫಲವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ರೈಲು ಹಳಿ, ಬೋಗಿಗಳು ಹಾಗೂ ಸಿಗ್ನಲ್‌ಗಳನ್ನು ನಿತ್ಯ ತಪಾಸಣೆ ಮಾಡುವ ಮೂಲಕ, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಿಬ್ಬಂದಿಗೆ ನಿರಂತರ ತರಬೇತಿ ಮತ್ತು ಕೌನ್ಸೆಲಿಂಗ್ ಮಾಡಲಾಗುತ್ತಿದೆ’ ಎಂದು ಹೇಳಿದರು.