ನೇಪಾಳದಲ್ಲಿ ಲಷ್ಕರ್ ಉಗ್ರರ ನೆಲೆ

0
405

ಭಾರತ ಮತ್ತು ಬಾಂಗ್ಲಾದೇಶದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಅನುಕೂಲವಾಗುವಂತೆ ಲಷ್ಕರ್ ಎ ತೋಯ್ಬಾ ಸಂಘಟನೆ ನೇಪಾಳದಲ್ಲಿ ನೆಲೆ ವಿಸ್ತರಿಸಲು ಮುಂದಾಗಿದೆ. ಎನ್​ಜಿಒ ಸೋಗಿನಲ್ಲಿ ಉಗ್ರರ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ಕಾಠ್ಮಂಡು: ಭಾರತ ಮತ್ತು ಬಾಂಗ್ಲಾದೇಶದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಅನುಕೂಲವಾಗುವಂತೆ ಲಷ್ಕರ್ ಎ ತೋಯ್ಬಾ ಸಂಘಟನೆ ನೇಪಾಳದಲ್ಲಿ ನೆಲೆ ವಿಸ್ತರಿಸಲು ಮುಂದಾಗಿದೆ. ಎನ್​ಜಿಒ ಸೋಗಿನಲ್ಲಿ ಉಗ್ರರ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ಲಷ್ಕರ್​ಗೆ ನೇಪಾಳದ ಪಾಕ್ ರಾಯಭಾರ ಕಚೇರಿ ಅಗತ್ಯ ಆರ್ಥಿಕ ನೆರವು ನೀಡುತ್ತಿದೆ. ಪಾಕ್ ಅಧಿಕಾರಿಗಳೇ ಎನ್​ಜಿಒ ಆರಂಭಿಸಿದ್ದಾರೆ. ರಾಜತಾಂತ್ರಿಕರ ಸೋಗಿನಲ್ಲಿ ಪಾಕ್​ನ ಬೇಹುಗಾರಿಕಾ ಸಂಸ್ಥೆ ಐಎಸ್​ಐ ಏಜೆಂಟರು ಇತ್ತೀಚೆಗೆ ಮೊರಾಂಗ್ ಜಿಲ್ಲೆಯ ಬಿರಾಟ್ ನಗರಕ್ಕೆ ತೆರಳಿದ್ದರು ಎಂದು ವರದಿಗಳು ತಿಳಿಸಿವೆ.

ಚುನಾವಣೆ ಟಾರ್ಗೆಟ್

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಆಡಳಿತಾವಧಿ 2019ರ ಜನವರಿಯಲ್ಲಿ ಕೊನೆಗೊಳ್ಳಲಿದೆ. ಡಿಸೆಂಬರ್ 3ನೇ ವಾರದಲ್ಲಿ ಅಲ್ಲಿ ಸಂಸದೀಯ ಚುನಾವಣೆಗಳು ನಿಗದಿಯಾಗಿವೆ. ಈ ಸಂದರ್ಭದಲ್ಲಿ ಉಗ್ರ ದಾಳಿ ನಡೆಸುವುದು ಪಾಕ್​ನ ಉದ್ದೇಶವಾಗಿದೆ ಎನ್ನಲಾಗಿದೆ.

ಭಾರತಕ್ಕೆ ಆತಂಕ

ನೇಪಾಳದೊಂದಿಗೆ ಭಾರತ ಮುಕ್ತಗಡಿ ನೀತಿ ಹೊಂದಿದೆ. ಈ ಸೌಲಭ್ಯ ಬಳಸಿಕೊಂಡು ಉಗ್ರರು ಸುಲಭವಾಗಿ ಭಾರತದೊಳಗೆ ನುಸುಳಿ, ದಾಳಿ ಮಾಡುವ ಆತಂಕ ಎದುರಾಗಿದೆ. ಕೋಲ್ಕತ ಮತ್ತು ಬಾಂಗ್ಲಾದೇಶದಾದ್ಯಂತ ಉಗ್ರ ದಾಳಿ ನಡೆಸಲು ಢಾಕಾದ ಪಾಕ್ ರಾಯಭಾರ ಕಚೇರಿ ಸಂಚು ರೂಪಿಸುತ್ತಿದೆ ಎನ್ನಲಾಗಿದೆ. ಐಎಸ್​ಐ ಏಜೆಂಟರು ಬಾಂಗ್ಲಾದೇಶದ ಭಯೋತ್ಪಾದನಾ ಸಂಘಟನೆಗಳ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಉಗ್ರರ ನೇಮಕಾತಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಇತ್ತೀಚೆಗೆ ಢಾಕಾದಲ್ಲಿ ಜಮಾತ್ ಉಲ್ ಮುಜಾಹಿದ್ದೀನ್ ಎಂಬ ಉಗ್ರರ ಸಂಘಟನೆಯ ಪ್ರಮುಖರ ಜತೆ ಪಾಕ್ ಅಧಿಕಾರಿಗಳು ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.