ನೇತಾಜಿ ಸ್ಮರಣಾರ್ಥ 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ

0
505

ನೇತಾಜಿ ಸುಭಾಷ್ ಚಂದ್ರಬೋಸ್ ಪೋರ್ಟ್​ಬ್ಲೇರ್​ನಲ್ಲಿ ರಾಷ್ಟ್ರಧ್ವಜ ಹಾರಿಸಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ನವದೆಹಲಿ: ನೇತಾಜಿ ಸುಭಾಷ್ ಚಂದ್ರಬೋಸ್ ಪೋರ್ಟ್​ಬ್ಲೇರ್​ನಲ್ಲಿ ರಾಷ್ಟ್ರಧ್ವಜ ಹಾರಿಸಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಈ ನಾಣ್ಯ 35 ಗ್ರಾಂ ತೂಕವಿದ್ದು, ಶೇ.50 ಬೆಳ್ಳಿ, ಶೇ. 40 ತಾಮ್ರ ಮತ್ತು ತಲಾ ಶೇ. 5 ನಿಕ್ಕಲ್ ಮತ್ತು ಜಿಂಕ್ ಲೋಹಗಳನ್ನು ಒಳಗೊಂಡಿದೆ. ಪೋರ್ಟ್​ಬ್ಲೇರ್​ನ ಸೆಲ್ಯುಲರ್ ಜೈಲು ಕಟ್ಟಡದ ಹಿನ್ನೆಲೆಯಲ್ಲಿ ನೇತಾಜಿ ಧ್ವಜಾರೋಹಣ ಮಾಡಿದ ಚಿತ್ರ, 75 ರೂ. ಎಂಬ ಅಂಕಿ ಹಾಗೂ ದೇವನಾಗರಿ ಹಾಗೂ ಇಂಗ್ಲಿಷ್​ನಲ್ಲಿ ‘ಫರ್ಸ್ಟ್ ಫ್ಲಾಗ್ ಹಾಸ್ಟಿಂಗ್ ಡೇ’ ಎಂಬ ವಾಕ್ಯ ನಾಣ್ಯದಲ್ಲಿ ಇರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸುಭಾಷ್ ಚಂದ್ರ ಬೋಸ್ ಕಟ್ಟಿದ ಆಜಾದ್ ಹಿಂದ್ ಫೌಜ್ (ಐಎನ್​ಎ) ಅಮೃತ ಮಹೋತ್ಸವ ಕಾರ್ಯಕ್ರಮ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಡಿ. 30ರಂದು ನಡೆಯಲಿದೆ. ಪೋರ್ಟ್​ಬ್ಲೇರ್​ನಲ್ಲಿ 150 ಅಡಿ ಉದ್ದದ ರಾಷ್ಟ್ರ ಧ್ವಜವನ್ನು ಪ್ರಧಾನಿ ನರೇಂದ್ರ ಮೋದಿ ಹಾರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನೇತಾಜಿ ಸ್ಮರಣಾರ್ಥ ಅಂಚೆ ಚೀಟಿ ಮತ್ತು ಈ ನಾಣ್ಯ ಬಿಡುಗಡೆ ಮಾಡಲಿದ್ದಾರೆ.

1943ರಲ್ಲಿ ನೇತಾಜಿ ಪೋರ್ಟ್​ಬ್ಲೇರ್​ನಲ್ಲಿ ರಾಷ್ಟ್ರ ಧ್ವಜ ಹಾರಿಸಿ ಅಂಡಮಾನ್ ಮತ್ತು ನಿಕೋಬರ್ ಬ್ರಿಟಿಷರಿಂದ ಮುಕ್ತವಾದ ಭಾರತದ ಮೊದಲ ಭೂಭಾಗ ಎಂದು ಘೋಷಿಸಿದ್ದರು. ನೇತಾಜಿ ರಚಿಸಿದ ಆಜಾದ್ ಹಿಂದ್ ಸರ್ಕಾರದ ಅಮೃತ ಮಹೋತ್ಸವದ ಅಂಗವಾಗಿ ಅ.21ರಂದು ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ತಿರಂಗಾ ಹಾರಿಸಿದ್ದರು. (ಏಜೆನ್ಸೀಸ್​)