ನುಗ್ಗೆಯಲ್ಲಿ ಪೋಷಕಾಂಶ ಹೇರಳ :ಬೆಂಗಳೂರಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಪತ್ತೆ

0
44

ಭಾರತದಾದ್ಯಂತ ಮನೆಯ ಹಿರಿಯಜ್ಜಿಯರ ಅಡುಗೆಯಲ್ಲಿ ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪಿಗೆ ಮೊದಲ ಸ್ಥಾನ ಇರುವುದು ಏತಕ್ಕೆ? ಇಂಥಹದ್ದೊಂದು ಪ್ರಶ್ನೆಯನ್ನು ಎದುರು ಇಟ್ಟುಕೊಂಡು ಸಂಶೋಧನೆ ಆರಂಭಿಸಿದ ಬೆಂಗಳೂರಿನ ವಿಜ್ಞಾನಿಗಳ ತಂಡವು ಉತ್ತರವನ್ನು ಕಂಡುಕೊಂಡಿದೆ.

ನವದೆಹಲಿ: ಭಾರತದಾದ್ಯಂತ ಮನೆಯ ಹಿರಿಯಜ್ಜಿಯರ ಅಡುಗೆಯಲ್ಲಿ ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪಿಗೆ ಮೊದಲ ಸ್ಥಾನ ಇರುವುದು ಏತಕ್ಕೆ? ಇಂಥಹದ್ದೊಂದು ಪ್ರಶ್ನೆಯನ್ನು ಎದುರು ಇಟ್ಟುಕೊಂಡು ಸಂಶೋಧನೆ ಆರಂಭಿಸಿದ ಬೆಂಗಳೂರಿನ ವಿಜ್ಞಾನಿಗಳ ತಂಡವು ಉತ್ತರವನ್ನು ಕಂಡುಕೊಂಡಿದೆ.

ಮಾನವ ಆರೋಗ್ಯವನ್ನು ಸುಧಾರಿಸಬಲ್ಲ ಐದು ಸ್ವರೂಪದ ರಸಾಯನ ಧಾತುಗಳು ಮತ್ತು ಮೂರು ಸ್ವರೂಪದ ಪೌಷ್ಟಿಕಾಂಶಗಳು ನುಗ್ಗೆಯಲ್ಲಿವೆ ಎಂಬುದನ್ನು ಬೆಂಗಳೂರಿನ ‘ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ’ (ಎನ್‌ಸಿಬಿಎಸ್‌) ವಿಜ್ಞಾನಿಗಳ ತಂಡವು ಕಂಡುಕೊಂಡಿದೆ. ಈ ಸಂಶೋಧನೆಗೆ ಸಂಬಂಧಿಸಿದ ವರದಿಯು ‘ಜಿನಾಮಿಕ್ಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

‘ನುಗ್ಗೆಕಾಯಿ, ಸೊಪ್ಪು ಮತ್ತು ಹೂವಿನಲ್ಲಿ ‘ಎ’, ‘ಸಿ’ ಮತ್ತು ‘ಇ’ ಪೌಷ್ಟಿಕಾಂಶಗಳು ಹೇರಳವಾಗಿವೆ. ಇವು ಕೊಬ್ಬು ಕರಗಿಸುವಿಕೆ, ಮಧುಮೇಹ ನಿಯಂತ್ರಣ, ನರಸಂಬಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್‌ ನಿರೋಧಕವಾಗಿ ಕೆಲಸ ಮಾಡುತ್ತವೆ’ ಎಂದು ಸಂಶೋಧನಾ ತಂಡದ ಮುಖ್ಯಸ್ಥೆ ಆರ್.ಸೌಧಾಮಿನಿ ಮಾಹಿತಿ ನೀಡಿದ್ದಾರೆ.

‘ಮಾನವನ ದೇಹದಲ್ಲಿರುವ ಕೊಬ್ಬು ಕರಗಿಸಿ ತೂಕವನ್ನು ನಿಯಂತ್ರಣದಲ್ಲಿ ಇರಿಸುವ ‘ಮೌರಿನ್’ ಮತ್ತು ‘ಕ್ವೆರ್ಸೆಟಿನ್’, ಕ್ಯಾನ್ಸರ್ ನಿರೋಧಕವಾಗಿ ಕೆಲಸ ಮಾಡುವ ‘ಕೇಂಫೆರಾಲ್’, ‘ಅರ್ಸೋಲಿಕ್’ ಮತ್ತು ‘ಒಲೀನೊಲಿಕ್’ ಧಾತುಗಳು ನುಗ್ಗೆಯಲ್ಲಿ ಹೇರಳವಾಗಿವೆ. ಬೇರೆ ಸೊಪ್ಪುಗಳಿಗಿಂತ ನುಗ್ಗೆ ಸೊಪ್ಪಿನಲ್ಲಿ 30 ಪಟ್ಟು ಹೆಚ್ಚು ಕಬ್ಬಿಣಾಂಶ ಮತ್ತು 100 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದೆ’ ಎಂದು ಸಂಶೋಧನಾ ತಂಡವು ಹೇಳಿದೆ.

‘ನೀರಿನ ಶುದ್ಧೀಕರಣ ಮತ್ತು ರಸಾಯನ ವಸ್ತುಗಳ ಸಂಸ್ಕರಣೆಗೆ ನುಗ್ಗೆಯನ್ನು ಬಳಸಿಕೊಳ್ಳಬಹುದು. ಈ ಮೂಲಕ ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ನುಗ್ಗೆಯ ವಾಣಿಜ್ಯ ಬಳಕೆಯನ್ನು ಪ್ರೋತ್ಸಾಹಿಸಬಹುದು’ ಎಂದು ಸೌಧಾಮಿನಿ ಹೇಳಿದ್ದಾರೆ.

“ಆಯುರ್ವೇದದಲ್ಲಿ ನುಗ್ಗೆಯ ಮಹತ್ವವನ್ನು ವಿವರಿಸಲಾಗಿದೆ. ಆದರೆ ಅದರಲ್ಲಿರುವ ರಸಾಯನಿಕ ಧಾತುಗಳು ಮತ್ತು ಪೌಷ್ಟಿಕಾಂಶಗಳ ಪ್ರಮಾಣವನ್ನು ಪತ್ತೆಮಾಡುವ ಕೆಲಸ ನಡೆದಿದೆ.”

   – ಆರ್‌.ಸೌಧಾಮಿನಿ, ಸಂಶೋಧನಾ ತಂಡದ ಮುಖ್ಯಸ್ಥೆ