ನಿಷೇಧಿತ ಉದ್ದೀಪನಾ ಮದ್ದು ಸೇವನೆ :”ಗೋಮತಿ ಮಾರಿಮುತ್ತು” ತಾತ್ಕಾಲಿಕ ಅಮಾನತು

0
19

ಭಾರತದ ಅಥ್ಲೀಟ್‌ ಗೋಮತಿ ಮಾರಿಮುತ್ತು ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟಿರುವ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ನವದೆಹಲಿ (ಪಿಟಿಐ): ಭಾರತದ ಅಥ್ಲೀಟ್‌ ಗೋಮತಿ ಮಾರಿಮುತ್ತು ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟಿರುವ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ತಮಿಳುನಾಡಿನ ಗೋಮತಿ, ಹೋದ ತಿಂಗಳು ದೋಹಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 2 ನಿಮಿಷ 2.70 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದರು.

ಚಾಂಪಿಯನ್‌ಷಿಪ್‌ಗೂ ಮುನ್ನ ಅವರಿಂದ ಮೂತ್ರದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ನಿಷೇಧಿತ ಸ್ಟೆರಾಯ್ಡ್‌ ಅಂಶ ಪತ್ತೆಯಾಗಿದೆ.

‘ಬಿ’ ಮಾದರಿಯ ಪರೀಕ್ಷೆಯಲ್ಲೂ ಗೋಮತಿ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾದರೆ ಗರಿಷ್ಠ ನಾಲ್ಕು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಲಿದ್ದಾರೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಚಿನ್ನದ ಪದಕವನ್ನೂ  ಕಳೆದುಕೊಳ್ಳಲಿದ್ದಾರೆ.

‘ಗೋಮತಿ ಅವರು ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿದೆ. ಹೀಗಾಗಿ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ’ ಎಂದು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಎಎಫ್‌ಐ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ವರ್ಷದ ಮಾರ್ಚ್‌ 15 ರಿಂದ 18ರವರೆಗೆ ಪಟಿಯಾಲದಲ್ಲಿ ನಡೆದಿದ್ದ ಫೆಡರೇಷನ್‌ ಕಪ್‌ಗೂ ಮುನ್ನ ಗೋಮತಿಯವರಿಂದ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ನಿಷೇಧಿತ ಉದ್ದೀಪನಾ ಮದ್ದಿನ ಅಂಶ ಪತ್ತೆಯಾಗಿತ್ತು ಎನ್ನಲಾಗಿದೆ. ಆದರೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕದ (ನಾಡಾ) ವರದಿ ಎರಡು ತಿಂಗಳಾದರೂ ನಮ್ಮ ಕೈಸೇರಿಲ್ಲ. ನಿಗದಿತ ಸಮಯದಲ್ಲೇ ವರದಿ ಸಿಕ್ಕಿದ್ದರೆ ಗೋಮತಿ ಅವರನ್ನು ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಕಳುಹಿಸುತ್ತಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗುವುದನ್ನೂ ತಪ್ಪಿಸಬಹುದಿತ್ತು’ ಎಂದು ಅವರು ವಿವರಿಸಿದ್ದಾರೆ.

‘ನಾಡಾದ ಅಧಿಕಾರಿಗಳು ವರದಿ ನೀಡಲು ಏಕೆ ತಡ ಮಾಡುತ್ತಿದ್ದಾರೆ ಎಂಬುದು ನಮಗಂತೂ ಗೊತ್ತಿಲ್ಲ. ಗೋಮತಿ ಅವರು ಇದುವರೆಗೂ ಒಮ್ಮೆಯೂ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿರಲಿಲ್ಲ.ಫೆಡರೇಷನ್‌ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಾಗಲೇ ಹಲವರು ಅವರ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು’ ಎಂದಿದ್ದಾರೆ.

30 ವರ್ಷ ವಯಸ್ಸಿನ ಗೋಮತಿ, ಫೆಡರೇಷನ್‌ ಕಪ್‌ನಲ್ಲಿ ಎರಡು ನಿಮಿಷ 03.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.