ನಿಲೇಕಣಿ ಮರು ನೇಮಕಕ್ಕೆ ಇನ್ಪೋಸಿಸ್ ಮಂಡಳಿ ಶಿಫಾರಸು

0
26

ಇನ್ಫೋಸಿಸ್‌ ಅಧ್ಯಕ್ಷ ಸ್ಥಾನಕ್ಕೆ ನಂದನ್‌ ನಿಲೇಕಣಿ ಅವರನ್ನು ಮರು ನೇಮಕ ಮಾಡಲು ಕಂಪನಿಯ ಆಡಳಿತ ಮಂಡಳಿ ಶಿಫಾರಸು ಮಾಡಿದೆ.

ಬೆಂಗಳೂರು: ಇನ್ಫೋಸಿಸ್‌ ಅಧ್ಯಕ್ಷ ಸ್ಥಾನಕ್ಕೆ ನಂದನ್‌ ನಿಲೇಕಣಿ ಅವರನ್ನು ಮರು ನೇಮಕ ಮಾಡಲು ಕಂಪನಿಯ ಆಡಳಿತ ಮಂಡಳಿ ಶಿಫಾರಸು ಮಾಡಿದೆ. 

2017ರ ಆಗಸ್ಟ್‌ 24ರಂದು ನಿಲೇಕಣಿ ಅವರು ಕಂಪನಿಯ ಕಾರ್ಯ ನಿರ್ವಾಹಕೇತರ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದು, ಅವರ ನಿವೃತ್ತಿ ಮತ್ತು ಮರು ನೇಮಕ ಪ್ರಕ್ರಿಯೆಗಳು ನಿಯಮ ಪ್ರಕಾರ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ನಿಲೇಕಣಿ ಅವರನ್ನು ಮುಂದುವರಿಸಲು ಮಂಡಳಿ ಮುಂದಾಗಿದೆ. 

ಇನ್ಫೋಸಿಸ್‌ ನಾರಾಯಣ ಮೂರ್ತಿ ಸೇರಿದಂತೆ ಸಂಸ್ಥಾಪಕರು ಮತ್ತು ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ನಡುವೆ ಈ ಹಿಂದೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಆ ಸಂದರ್ಭದಲ್ಲಿ ವಿಶಾಲ್‌ ಸಿಕ್ಕಾ ರಾಜೀನಾಮೆ ನೀಡಿದ್ದರು. ಕಂಪನಿಯ ಅಧ್ಯಕ್ಷರಾಗಿದ್ದ ಆರ್‌.ಶೇಷಸಾಯಿ ಸಹ ಕಂಪನಿ ತೊರೆದಿದ್ದರು. ಕಂಪನಿಯಲ್ಲಿ ಅಂದು ಗೊಂದಲ ಮತ್ತು ಬಿಕ್ಕಟ್ಟುಗಳು ಉಲ್ಪಣಿಸಿದ್ದವು. ಆಗ ಕಂಪನಿಗೆ ಮರು ಪ್ರವೇಶಿಸಿದ್ದ ನಿಲೇಕಣಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. 

ನಿಲೇಕಣಿ ಅವರ ಕೋರಿಕೆಯ ಮೇರೆಗೆ, ಅವರು ತಮ್ಮ ಸೇವೆಗಳಿಗೆ ಇನ್ಫೋಸಿಸ್‌ನಿಂದ ಯಾವುದೇ ಸಂಭಾವನೆ ಸ್ವೀಕರಿಸುತ್ತಿಲ್ಲ. 

 
ಇನ್ಫೋಸಿಸ್ ಸಿಇಒ ಪಾರೇಖ್ ವೇತನ  24.67 ಕೋಟಿ
 
ದೇಶದ ಎರಡನೆ ಅತಿದೊಡ್ಡ ಐ.ಟಿ ಸಂಸ್ಥೆ ಇನ್ಫೋಸಿಸ್‌ ಹಾಲಿ ಸಿಇಒ ಸಲೀಲ್‌ ಪರೇಖ್‌ ಅವರು 2018-19ನೇ ಸಾಲಿನಲ್ಲಿ ವಾರ್ಷಿಕ ಒಟ್ಟು 24.67 ಕೋಟಿ ರೂ. ವೇತನ ಪ್ಯಾಕೇಜ್‌ ಪಡೆದಿದ್ದಾರೆ.
 
2018ರ ಜನವರಿಯಲ್ಲಿ ಸಿಇಒ ಆಗಿ ನೇಮಕಗೊಂಡಿರುವ ಪಾರೇಖ್‌, 2018–19ರಲ್ಲಿ  6.07 ಕೋಟಿ ಸ್ಥಿರ ವೇತನ,  10.96 ಕೋಟಿ ಬೋನಸ್,  7.64 ಕೋಟಿ ಮೊತ್ತದ ಷೇರು ಮತ್ತಿತರ ಹೆಚ್ಚುವರಿ ಪ್ರಯೋಜನಗಳ ರೂಪದಲ್ಲಿ ಒಟ್ಟಾರೆ  24.67 ಕೋಟಿ ವೇತನ ಭತ್ಯೆ ಪಡೆದುಕೊಂಡಿರುವುದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟಿಸಿಎಸ್‌ ಸಿಇಒ: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ (ಟಿಸಿಎಸ್‌) ಸಿಇಒ ರಾಜೇಶ್‌ ಗೋಪಿನಾಥ್‌ ಅವರು  16 ಕೋಟಿಗಳ ವೇತನ ಭತ್ಯೆ ಪಡೆದುಕೊಂಡಿದ್ದಾರೆ.

ಇವರ ವೇತನ ಪ್ಯಾಕೇಜ್‌ನಲ್ಲಿ  1.15 ಕೋಟಿ ಸಂಬಳ,  1.26 ಕೋಟಿ ಹೆಚ್ಚುವರಿ ಭತ್ಯೆ, 13 ಕೋಟಿ ಕಮಿಷನ್‌ ಮತ್ತು  60 ಲಕ್ಷ ಇತರ ಭತ್ಯೆಗಳು ಸೇರಿವೆ.