ನಾಳೆಯಿಂದ ಹದಿನಾರನೇ ಲೋಕಸಭೆಯ ಅಂತಿಮ ವರ್ಷದ ಮೊದಲ ಅಧಿವೇಶನ ಆರಂಭ

0
24

ಹದಿನಾರನೇ ಲೋಕಸಭೆಯ ಅಂತಿಮ ವರ್ಷದ ಮೊದಲ ಅಧಿವೇಶನ ಬುಧವಾರ ಆರಂಭವಾಗಲಿದ್ದು, ಈ ಬಾರಿ ಮಹಿಳಾ ವಿಷಯಕ್ಕೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ಮೇಲ್ಮನೆಯಲ್ಲಿ ಒಪ್ಪಿಗೆ ದೊರೆಯುವ ಸುಳಿವು ಸಿಕ್ಕಿರುವಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರೆ ಬೆಂಬಲ ನೀಡುವುದಾಗಿ ಹೇಳಿರುವುದು ಕುತೂಹಲ ಕೆರಳಿಸಿದೆ.

ನವದೆಹಲಿ: ಹದಿನಾರನೇ ಲೋಕಸಭೆಯ ಅಂತಿಮ ವರ್ಷದ ಮೊದಲ ಅಧಿವೇಶನ ಬುಧವಾರ ಆರಂಭವಾಗಲಿದ್ದು, ಈ ಬಾರಿ ಮಹಿಳಾ ವಿಷಯಕ್ಕೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ಮೇಲ್ಮನೆಯಲ್ಲಿ ಒಪ್ಪಿಗೆ ದೊರೆಯುವ ಸುಳಿವು ಸಿಕ್ಕಿರುವಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರೆ ಬೆಂಬಲ ನೀಡುವುದಾಗಿ ಹೇಳಿರುವುದು ಕುತೂಹಲ ಕೆರಳಿಸಿದೆ.

ಮಹಿಳಾ ಮೀಸಲಾತಿ ಮಸೂದೆ: ಸಂಸತ್ ಮತ್ತು ರಾಜ್ಯ ಶಾಸನಸಭೆಗಳಲ್ಲಿ ಶೇ.33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮೀಸಲಾತಿ ಮಸೂದೆ ಅಥವಾ ಸಂವಿಧಾನ (108ನೇ ತಿದ್ದುಪಡಿ) ಮಸೂದೆ 2008ರಲ್ಲೆ (14ನೇ ಲೋಕಸಭೆ) ಸಂಸತ್​ನಲ್ಲಿ ಮಂಡನೆಯಾಗಿತ್ತು. ರೊಟೇಷನ್ (ಸರದಿಯಂತೆ ಕ್ಷೇತ್ರಗಳ ಬದಲಾವಣೆ) ಪದ್ಧತಿಯಂತೆ ಕ್ಷೇತ್ರವಾರು ಮೀಸಲಾತಿ ಕಲ್ಪಿಸುವ ಅಂಶ ಮಸೂದೆಯಲ್ಲಿತ್ತು. ಆದರೆ, ಅನುಮೋದನೆ ದೊರೆಯಲಿಲ್ಲ. ಮತ್ತೆ ಈ ಮಸೂದೆ ಮಂಡನೆಯಾಗಿ 2010ರ ಮೇ 9ರಂದು ಮೇಲ್ಮನೆಯಲ್ಲಿ ಒಪ್ಪಿಗೆ ದೊರೆತರೂ ಲೋಕಸಭೆಯಲ್ಲಿ ದೊರೆಯಲಿಲ್ಲ.

ಪುರುಷ ಪ್ರಧಾನವಾಗಿರುವ ರಾಜಕೀಯ ಪಕ್ಷಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಭದ್ರಕೋಟೆ ಎನಿಸಿದ ಕ್ಷೇತ್ರಗಳನ್ನು ರಕ್ಷಿಸಿಕೊಳ್ಳಲು ಅನೇಕ ಪ್ರಭಾವಿ ಮುಖಂಡರು ಈ ಮಸೂದೆಗೆ ಅಡ್ಡಗಾಲು ಹಾಕಿದರು. ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷ ಸೇರಿ ಇನ್ನಿತರ ಪ್ರಾದೇಶಿಕ ಪಕ್ಷಗಳು ಒಳಮೀಸಲಾತಿಗೆ ಪಟ್ಟು ಹಿಡಿದ ಕಾರಣ ಮಸೂದೆಗೆ ಅಂಗೀಕಾರ ಪಡೆಯಲು ತೊಡಕಾಯಿತು. ಮಹಿಳಾ ಮೀಸಲಾತಿಯ ಕೂಗು ಗಟ್ಟಿ ದನಿ ಪಡೆದುಕೊಂಡಿದ್ದು 1993ರಲ್ಲಿ. ಮೂರು ಹಂತಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸುವ ಮಸೂದೆಗೆ ಅಂಗೀಕಾರ ದೊರೆತಾಗ ಈ ಮೀಸಲಾತಿಯನ್ನು ಶಾಸನಸಭೆಗೂ ವಿಸ್ತರಿಸಬೇಕು ಎಂಬ ಒತ್ತಾಯ ಪ್ರಬಲಗೊಂಡಿತು.

ಮಹಿಳಾ ಮೀಸಲಾತಿ ಸ್ಥಿತಿಗತಿ: ಲೋಕಸಭೆಯ ಒಟ್ಟು ಚುನಾಯಿತ ಸ್ಥಾನ 543 ಇದ್ದು, ಶೇ.33 ಮಹಿಳಾ ಮೀಸಲು ದೊರೆತರೆ 179 ಸ್ಥಾನ ಮಹಿಳೆಯರಿಗೆ ಸಿಗುತ್ತದೆ. ಅದೇ ರಾಜ್ಯಸಭೆಯಲ್ಲಿ ಚುನಾಯಿತ 238 ಸ್ಥಾನಗಳಲ್ಲಿ 78 ಸ್ಥಾನಗಳು ಮಹಿಳೆಯರ ಪಾಲಾಗುತ್ತದೆ. ಈ ಅಧಿವೇಶನದಲ್ಲೆ ಮಸೂದೆ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತ ದೊರೆತರೆ ಈ ವರ್ಷಾಂತ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭೆ ಮತ್ತು 2019ರ ಲೋಕಸಭಾ ಚುನಾವಣೆಯಿಂದಲೇ ಮಹಿಳೆಯರಿಗೆ ಕ್ಷೇತ್ರ ಮೀಸಲು ದೊರೆಯಲಿದೆ.

ಬಾಕಿ ಇರುವ ಮಸೂದೆಗಳು

# ಹಿಂದುಳಿದ ವರ್ಗಗಳ ರಾಷ್ಟ್ರಿಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ಮಸೂದೆ

# ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ತಿದ್ದುಪಡಿ

# ತೃತೀಯ ಲಿಂಗಿಗಳ ಹಕ್ಕು ಸಂರಕ್ಷಣೆ ವಿಧೇಯಕ

# ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆ ಮಸೂದೆ

# ಕಾರ್ವಿುಕರ ವೇತನ ಸಂಹಿತೆ ಮಸೂದೆ

# ಕಾರ್ಖಾನೆ(ತಿದ್ದುಪಡಿ) ವಿಧೇಯಕ

# ಗುತ್ತಿಗೆ ಕಾರ್ವಿುಕರ ತಿದ್ದುಪಡಿ ಮಸೂದೆ

# ದೆಹಲಿಯಲ್ಲಿ ಅಂತಾರಾಷ್ಟ್ರೀಯ ರಾಜೀ ಪಂಚಾಯಿತಿ ಕೇಂದ್ರ ಸ್ಥಾಪನೆ ವಿಧೇಯಕ

# ಮೋಟಾರು ವಾಹನ (ತಿದ್ದುಪಡಿ) ಮಸೂದೆ

# ಡ್ಯಾಂ ಸುರಕ್ಷತಾ ಮಸೂದೆ

ಸುಗ್ರೀವಾಜ್ಞೆಗಳು

# ಕ್ರಿಮಿನಲ್ ಕಾನೂನು (ತಿದ್ದುಪಡಿ)

# ಹೋಮಿಯೋಪಥಿ ಕೇಂದ್ರೀಯ ಮಂಡಳಿ ತಿದ್ದುಪಡಿ

# ರಾಷ್ಟ್ರೀಯ ಕ್ರೀಡಾ ವಿವಿ

# ದಿವಾಳಿತನ ಸಂಹಿತೆ ತಿದ್ದುಪಡಿ

ತ್ರಿವಳಿ ತಲಾಕ್ ನಿಷೇಧ ಮಸೂದೆ

ಮುಸ್ಲಿಂ ಮಹಿಳೆಯರ (ಮದುವೆ ಹಕ್ಕು ಸಂರಕ್ಷಣೆ) ಮಸೂದೆ ಅಥವಾ ತ್ರಿವಳಿ ತಲಾಕ್ ನಿಷೇಧ ಮಸೂದೆಯನ್ನು 2017ರ ಚಳಿಗಾಲದ ಅಧಿವೇಶನದಲ್ಲೆ ಮಂಡಿಸಲಾಯಿತು. ಲೋಕಸಭೆಯಲ್ಲಿ ಅನುಮೋದನೆ ಪಡೆದರೂ, ಮೇಲ್ಮನೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ಮಸೂದೆಗೆ ತಡೆಯಾಯಿತು. ಕಾಂಗ್ರೆಸ್ ಮತ್ತಿತರ ಪಕ್ಷಗಳು ಕೆಲವು ತಿದ್ದುಪಡಿಗೆ ಪಟ್ಟು ಹಿಡಿದು ವಿಧೇಯಕಕ್ಕೆ ಅಡ್ಡಿ ಮಾಡಿದವು. ಬಜೆಟ್ ಅಧಿವೇಶನ ದಲ್ಲೂ ಮಸೂದೆಗೆ ಅಂಗೀಕಾರ ಪಡೆಯಲು ಆಗಲಿಲ್ಲ. ಅಧಿವೇಶನದ ಬಹುಪಾಲು ಕಲಾಪವು ವಿರೋಧ ಪಕ್ಷಗಳ ಪ್ರತಿಭಟನೆಗೆ ಆಹುತಿಯಾದ ಕಾರಣ ಈ ಮಸೂದೆ ಅಂಗೀಕಾರ ಆಗಲಿಲ್ಲ.

ಪ್ರಮುಖ ಮಸೂದೆಗಳು

ಜುಲೈ 18ರಿಂದ ಆ. 10ರವರೆಗೆ ನಡೆಯುವ ಮುಂಗಾರು ಅಧಿವೇಶನದಲ್ಲಿ ಹಲವು ಮಸೂದೆಗಳಿಗೆ ಒಪ್ಪಿಗೆ ಪಡೆಯಲು ಸರ್ಕಾರ ಬಯಸಿದೆ. ಇದರಲ್ಲಿ ಲೋಕಸಭೆಯಲ್ಲಿ 68 ಮತ್ತು ರಾಜ್ಯಸಭೆಯಲ್ಲಿ 50 ಮಸೂದೆಗಳು ಒಪ್ಪಿಗೆಗೆ ಕಾದಿವೆ. ಜತೆಗೆ ಹಣಕಾಸು ಅಪರಾಧ ಎಸಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿಗೆ ತಂದಿರುವ ಸುಗ್ರೀವಾಜ್ಞೆ ಸೇರಿ ಆರು ಸುಗ್ರೀವಾಜ್ಞೆಗಳನ್ನು ಕಾಯ್ದೆಗೆ ಮಾರ್ಪಾಟು ಮಾಡಬೇಕಿದೆ.