ನಮಗೆ ಕಾಶ್ಮೀರ ಬೇಡ, ಇರುವ ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸಲು ಪಾಕಿಸ್ತಾನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಂಡನ್: ನಮಗೆ ಕಾಶ್ಮೀರ ಬೇಡ, ಇರುವ ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸಲು ಪಾಕಿಸ್ತಾನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಂಡನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಫ್ರಿದಿ ನನ್ನನ್ನು ಕೇಳುವುದಾದರೆ ಕಾಶ್ಮೀರ ಪಾಕಿಸ್ತಾನಕ್ಕೆ ಬೇಡ. ಅದನ್ನು ಭಾರತಕ್ಕೂ ನೀಡಬೇಡಿ. ಕಾಶ್ಮೀರ ಒಂದು ಸ್ವತಂತ್ರ ದೇಶವಾಗಬೇಕು. ಆ ಮೂಲಕ ಮಾನವೀಯತೆ ಉಳಿಯಬೇಕು. ಕಾಶ್ಮೀರದಲ್ಲಿ ಜನರು ಸಾಯಬಾರದು. ಕಾಶ್ಮೀರದಲ್ಲಿ ಜನರು ಸಾಯುತ್ತಿರುವುದನ್ನು ನೋಡಿದಾಗ ನನಗೆ ಅತೀವ ದುಃಖವಾಗುತ್ತದೆ. ಯಾವುದೇ ಸಮುದಾಯದವರು ಮೃತಪಟ್ಟರೂ ಅದು ನನಗೆ ನೋವಿನ ಸಂಗತಿಯೇ ಎಂದು ಅಫ್ರಿದಿ ತಿಳಿಸಿದ್ದಾರೆ.
ಈ ಹಿಂದೆಯೂ ಸಹ ಅಫ್ರಿದಿ ಕಾಶ್ಮೀರದ ಕುರಿತು ಮಾತನಾಡಿದ್ದು, ಕಾಶ್ಮೀರದಲ್ಲಿ ರಕ್ತಪಾತವನ್ನು ತಡೆಯಲು ವಿಶ್ವಸಂಸ್ಥೆ ವಿಫಲವಾಗಿದೆ. ವಿಶ್ವಸಂಸ್ಥೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಟ್ವೀಟ್ ಮಾಡಿದ್ದರು. 2016ರಲ್ಲೂ ಸಹ ಅಫ್ರಿದಿ ಕಾಶ್ಮೀರ ಕುರಿತು ಹೇಳಿಕೆ ನೀಡಿದ್ದು, ಪಾಕಿಸ್ತಾನಿ ಕ್ರಿಕೆಟಿಗರನ್ನು ಕಾಶ್ಮೀರಿ ಅಭಿಮಾನಿಗಳು ಬೆಂಬಲಿಸುತ್ತಾರೆ ಎಂದು ತಿಳಿಸಿದ್ದರು.
ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವುದು ಪಾಕಿಸ್ತಾನದಲ್ಲಿ ತಮ್ಮ ಭದ್ರ ನೆಲೆ ಹೊಂದಿರುವ ಲಷ್ಕರ್ ಎ ತೋಯ್ಬಾ, ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮತ್ತು ಹಫೀಜ್ ಸಯೀದ್ ಮತ್ತು ಮೌಲಾನಾ ಮಸೂದ್ ರಂತಹ ಉಗ್ರರು ಎಂಬುದನ್ನು ಅಫ್ರಿದಿ ಮರೆತು ಕಾಶ್ಮೀರ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)