ನಷ್ಟ ಪರಿಹಾರ ಅಂದಾಜಿಸಲು ತಜ್ಞರ ಸಮಿತಿ: ಎನ್‌ಜಿಟಿ ಆದೇಶ

0
253

ನದಿ, ಹಳ್ಳ, ಕೊಳ್ಳ ಮತ್ತು ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿ ನಡೆಸಲಾದ ಅಕ್ರಮ ಮರಳು ಗಣಿಗಾರಿಕೆಯಿಂದ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಉಂಟಾಗಿರುವ ನಷ್ಟ ಪರಿಹಾರವನ್ನು ಅಂದಾಜಿಸಲು ತಜ್ಞರ ಸಮಿತಿ ರಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಹತ್ವದ ಆದೇಶ ನೀಡಿದೆ.

ನವದೆಹಲಿ: ನದಿ, ಹಳ್ಳ, ಕೊಳ್ಳ ಮತ್ತು ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿ ನಡೆಸಲಾದ ಅಕ್ರಮ ಮರಳು ಗಣಿಗಾರಿಕೆಯಿಂದ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಉಂಟಾಗಿರುವ ನಷ್ಟ ಪರಿಹಾರವನ್ನು ಅಂದಾ
ಜಿಸಲು ತಜ್ಞರ ಸಮಿತಿ ರಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಹತ್ವದ ಆದೇಶ ನೀಡಿದೆ.

ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುವ ಮೂಲಕ ಪರಿಸರಕ್ಕೆ ಧಕ್ಕೆ ಉಂಟು ಮಾಡಿರುವ ಗುತ್ತಿಗೆದಾರರಿಂದ ಸಂಗ್ರಹಿಸಬೇಕಾದ ಪರಿಹಾರ ಮೊತ್ತ ಎಷ್ಟು ಎಂಬುದನ್ನು ಲೆಕ್ಕ ಹಾಕುವುದಲ್ಲದೆ, ಪರಿಸರ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಈ ಸಮಿತಿ ಅಧ್ಯಯನ ನಡೆಸಬೇಕಾಗಿದ್ದು, ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳ ಪ್ರತಿನಿಧಿಗಳನ್ನೂ ಈ ಸಮಿತಿ ಒಳಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಪ್ರಧಾನ ಪೀಠ ನೀಡಿರುವ ಆದೇಶದಲ್ಲಿ ಹೇಳಲಾಗಿದೆ. ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಮಂಡಳಿ ಈ ಆದೇಶ ನೀಡಿದೆ.

ಮರಳು ಗಣಿಗಾರಿಕೆ ಮಾಫಿಯಾ ದೇಶದೆಲ್ಲೆಡೆ ಬಲಿಷ್ಠವಾಗಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಗಣಿಗಾರಿಕೆ ನಡೆಸುವ ಕುರಿತು ವೈಜ್ಞಾನಿಕ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದರೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂಬ ಅರ್ಜಿದಾರರ ವಾದವನ್ನು ಹಸಿರು ಪೀಠವು ವಿಶೇಷವಾಗಿ ಪರಿಗಣಿಸಿದೆ.

ಅಕ್ರಮ ಮರಳು ಗಣಿಗಾರಿಕೆಯಿಂದ ಉಂಟಾಗಿರುವ ಪರಿಸರ ನಾಶದ ಪ್ರಮಾಣ ಹಾಗೂ ಅಕ್ರಮ ತಡೆಗೆ ಕೈಗೊಂಡ ವೈಜ್ಞಾನಿಕ ಕ್ರಮಗಳ ಕುರಿತು ಜೂನ್ 30ರೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ, ತಮಿಳುನಾಡು ಕೇರಳ ಸೇರಿದಂತೆ 18 ರಾಜ್ಯಗಳ ಸರ್ಕಾರಗಳಿಗೂ ಎನ್‌ಜಿಟಿ ಸೂಚಿಸಿದೆ.

ಅಕ್ರಮ ತಡೆಗೆ ಮುಂದಾಗದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಜ್ಞರ ಸಮಿತಿ ಶಿಫಾರಸು ಮಾಡಬೇಕು. ಅಲ್ಲದೆ, ಅಕ್ರಮ ಮರಳು ಗಣಿಗಾರಿಕೆಗೆ ಬಳಸಲಾದ ವಾಹನ ಅಥವಾ ಯಂತ್ರಗಳನ್ನು ವಶಪಡಿಸಿಕೊಳ್ಳಲು ಸೂಚಿಸಬೇಕು ಎಂದು ಆದೇಶ ತಿಳಿಸಿದೆ.