ನಶೀದ್‌ ಜೈಲುಶಿಕ್ಷೆ ರದ್ದುಗೊಳಿಸಿದ ಮಾಲ್ಡೀವ್ಸ್‌ ಸುಪ್ರೀಂ ಕೋರ್ಟ್‌

0
184

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಅವರಿಗೆ ಭಯೋತ್ಪಾದನೆ ಆರೋಪದಡಿ ನೀಡಿದ್ದ ಜೈಲು ಶಿಕ್ಷೆಯನ್ನು ಮಾಲ್ಡೀವ್ಸ್‌ನ ಸುಪ್ರೀಂ ಕೋರ್ಟ್‌ ನವೆಂಬರ್ 26 ರ ಸೋಮವಾರ ರದ್ದುಗೊಳಿಸಿದೆ.

ಮಾಲೆ (ಎಎಫ್‌ಪಿ): ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಅವರಿಗೆ ಭಯೋತ್ಪಾದನೆ ಆರೋಪದಡಿ ನೀಡಿದ್ದ ಜೈಲು ಶಿಕ್ಷೆಯನ್ನು ಮಾಲ್ಡೀವ್ಸ್‌ನ ಸುಪ್ರೀಂ ಕೋರ್ಟ್‌  ನವೆಂಬರ್ 26 ರ ಸೋಮವಾರ ರದ್ದುಗೊಳಿಸಿದೆ.

2015ರಲ್ಲಿ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ನಶೀದ್‌ಗೆ 13 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ‘ನಶೀದ್‌ ವಿರುದ್ಧ ತಪ್ಪು ಆರೋಪ ಹೊರಿಸಲಾಗಿತ್ತು. ಆದ್ದರಿಂದ ಶಿಕ್ಷೆ ರದ್ದುಗೊಳಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

2012ರಲ್ಲಿ ಕ್ರಿಮಿನಲ್ ಅಪರಾಧ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ಮೊಹಮದ್ ಅವರನ್ನು ಬಂಧಿಸುವಂತೆ ನಶೀದ್ ಅವರು ಆದೇಶಿಸಿದ್ದರು. ಇದರ ಬೆನ್ನಿಗೇ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದಲ್ಲದೆ, ಕ್ಷಿಪ್ರಕ್ರಾಂತಿ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಅಲ್ಲದೆ, ಬಂಧನಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ನಶೀದ್ ಅವರು ಭಾರತದಲ್ಲಿ ತಮಗೆ ಆಶ್ರಯ ನೀಡಬೇಕೆಂದು ಕೋರಿದ್ದರು. ಆದರೂ, ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ ಅವರು, ಅನಾರೋಗ್ಯದ ಕಾರಣ ನೀಡಿ ವಿದೇಶದಲ್ಲಿ ವಾಸವಾಗಿದ್ದರು.

ರಾಜಕೀಯ ವೈರಿಯಾಗಿದ್ದ ಅಬ್ದುಲ್ಲಾ ಯಾಮೀನ್‌ ಅಧಿಕಾರದಿಂದ ಕೆಳಗಿಳಿದ ತಿಂಗಳಿನ ನಂತರ ಈ ತೀರ್ಪು ಹೊರಬಿದ್ದಿದೆ. ಮಾಲ್ಡಿವಿಯನ್‌ ಡೆಮಾಕ್ರಟಿಕ್‌ ಪಕ್ಷದ ನಾಯಕರಾಗಿದ್ದ ನಶೀದ್‌ ವಿರೋಧ ಪಕ್ಷದಲ್ಲಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಆದರೆ, ಭಯೋತ್ಪಾದನೆ ಆರೋಪ ಹೊಂದಿದ್ದ ಕಾರಣ ಅವರು ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.

ಕೊನೆಗೆ, ಅವರ ಪಕ್ಷದ ಇಬ್ರಾಹಿಂ ಮೊಹಮ್ಮದ್‌ ಸೊಲಿಹ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಯಾಮೀನ್‌ ಪರಾಭವಗೊಳ್ಳದಿದ್ದರೆ ನಶೀದ್‌ ಅವರು ಮಾಲ್ಡೀವ್ಸ್‌ಗೆ ಹಿಂದಿರುಗುವುದು ಕಷ್ಟವಾಗಿತ್ತು. 

‘ನಶೀದ್‌ ಅವರಿಗೆ ಜೈಲು ಶಿಕ್ಷೆ ನೀಡಿದ್ದ ಕ್ರಮವು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿತ್ತು’ ಎಂದು ಅವರ ವಕೀಲ ಹಿಸಾನ್‌ ಹುಸೇನ್‌ ಹೇಳಿದರು.