ನವೆಂಬರ್ 22ಕ್ಕೆ “ಬಡವರ ಬಂಧು ಯೋಜನೆ” ಜಾರಿ

0
623

ಸಣ್ಣ ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ‘ಬಡವರ ಬಂಧು’ ಯೋಜನೆ ಹಾಗೂ ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ದಿಮೆ ಆರಂಭಿಸಲು 10 ಲಕ್ಷ ರೂ.ವರೆಗೆ ನೆರವು ನೀಡುವ ‘ಕಾಯಕ’ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು: ಸಣ್ಣ ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ‘ಬಡವರ ಬಂಧು’ ಯೋಜನೆ ಹಾಗೂ ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ದಿಮೆ ಆರಂಭಿಸಲು 10 ಲಕ್ಷ ರೂ.ವರೆಗೆ ನೆರವು ನೀಡುವ ‘ಕಾಯಕ’ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ನ.22ರಂದು ಸಿಎಂ ಕುಮಾರಸ್ವಾಮಿ ಬಡವರ ಬಂಧು ಯೋಜನೆಗೆ ಚಾಲನೆ ನೀಡಲಿದ್ದು, ಡಿಸೆಂಬರ್ ಮೊದಲ ವಾರ ‘ಕಾಯಕ’ ಯೋಜನೆಯೂ ಅಸ್ತಿತ್ವಕ್ಕೆ ಬರಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಡವರ ಬಂಧು ಯೋಜನೆಗೆ ಒಂದೊಂದು ನೋಡಲ್ ಬ್ಯಾಂಕ್ ಗುರುತಿಸಲಾಗುವುದು. ಇವು ಆಯಾ ಜಿಲ್ಲೆಗಳಲ್ಲಿನ ಸಾಲ ಸೌಲಭ್ಯದ ಬ್ಯಾಂಕ್​ಗಳನ್ನು ಸೂಚಿಸುತ್ತವೆ. ಅಂತಹ ಬ್ಯಾಂಕ್​ಗಳು ಮೊಬೈಲ್ ಸರ್ವಿಸ್ ವ್ಯಾನ್​ಗಳನ್ನು ಹೊಂದಲಿವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಜನತಾ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಬೆಂಗಳೂರು ಡಿಸಿಸಿ ಬ್ಯಾಂಕ್​ಗಳನ್ನು ನೋಡಲ್ ಬ್ಯಾಂಕ್​ಗಳಾಗಿ ಗುರುತಿಸಲಾಗಿದೆ. ಬೆಂಗಳೂರು ನಗರವೊಂದರದಲ್ಲೇ ಮೊದಲ ದಿನ 53 ಸಾವಿರ ವರ್ತಕರಿಗೆ ನೆರವು ನೀಡಲಾಗುವುದು. ಈಗಾಗಲೇ ರಾಜ್ಯಾದ್ಯಂತ ಬಡವರ ಬಂಧು ಯೋಜನೆಯಡಿ ಸಾಲಕ್ಕಾಗಿ ಭಾರಿ ಬೇಡಿಕೆ ಇದೆ. ಈ ಯೋಜನೆಯಿಂದ ಖಾಸಗಿ ಲೇವಾದೇವಿದಾರರ ಮೀಟರ್ ಬಡ್ಡಿ ದಂಧೆಯ ಮೇಲೆ ಕಡಿವಾಣ ಬೀಳಲಿದೆ ಎಂದು ವಿವರಿಸಿದರು.

ಶೂನ್ಯ ಬಡ್ಡಿ ದರ ವಿಧಿಸುವ ಪ್ರಸ್ತಾವಕ್ಕೆ ಹಣಕಾಸು ಇಲಾಖೆ ನಕಾರ ಸೂಚಿಸಿ, ಶೇ.4 ಬಡ್ಡಿ ವಿಧಿಸುವಂತೆ ಸಲಹೆ ಮಾಡಿತ್ತು. ಆ ಕಡತವನ್ನು ಸಿಎಂ ಕುಮಾರಸ್ವಾಮಿಯವರೇ ಖುದ್ದು ಪರಿಶೀಲಿಸಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ ಎಂದರು.

ಚಿಗುರೊಡೆಯುತ್ತಿದೆ ಕ್ಲಸ್ಟರ್ ಬೇಸಾಯ ಯೋಜನೆ: ರಾಜ್ಯದ ಕೃಷಿ ಕ್ಷೇತ್ರದಲ್ಲಿ ಗುರುತರ ಬದಲಾವಣೆ ತರಬೇಕೆಂಬ ಉದ್ಧೇಶದಿಂದ ಕ್ಲಸ್ಟರ್ ವ್ಯವಸಾಯ ಯೋಜನೆ ಅನುಷ್ಠಾನಕ್ಕಾಗಿ ಅಧ್ಯಯನ ನಡೆಸುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ಈಗಾಗಲೇ ಉತ್ತರಾಖಂಡ ರಾಜ್ಯದಲ್ಲಿ ಜಾರಿಯಲ್ಲಿರುವ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ನೆರವು ಕೋರಲಾಗಿದೆ ಎಂದು ಬಂಡೆಪ್ಪ ಖಾಶೆಂಪುರ

ತಿಳಿಸಿದರು. ಪ್ರತಿ 50 ರೈತರನ್ನು ಒಗ್ಗೂಡಿಸಿ ಸರಿಸುಮಾರು 300 ಎಕರೆ ಜಮೀನಿನಲ್ಲಿ ಸಾಮೂಹಿಕ ವ್ಯವಸಾಯ ನಡೆಸಿ, ಅದಕ್ಕೆ ಬೇಕಾಗುವ ಬಂಡವಾಳವನ್ನು 50 ರೈತರಿಂದಲೇ ರಚಿತವಾದ ಸಹಕಾರ ಸಂಘಗಳ ಮುಖಾಂತರ ಸಹಕಾರ ಇಲಾಖೆ ಹೂಡಿಕೆ ಮಾಡಲಿದೆ. ಇದರಿಂದ ರೈತರು ಸ್ವಾವಲಂಬಿಗಳಾಗಿ, ವೈಜ್ಞಾನಿಕ ವ್ಯವಸಾಯ ನಡೆಸುವಂತಾಗುತ್ತದೆ. ಈ ಬಗ್ಗೆ ವೆಚ್ಚದ ಕುರಿತಂತೆ ಅಧ್ಯಯನ ನಡೆಸಲು ಸೂಚಿಸಿದ್ದೇವೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿ, ಯೋಜನೆ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.

ಏನಿದು ಕಾಯಕ ಯೋಜನೆ?

ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ಗುಂಪುಸಾಲವಾಗಿ 10 ಲಕ್ಷ ರೂ.ವರೆಗೆ ನೆರವು ನೀಡುವ ‘ಕಾಯಕ’ ಯೋಜನೆಯಲ್ಲಿ ಮೊದಲ 5 ಲಕ್ಷ ರೂ. ಬಡ್ಡಿರಹಿತವಾಗಿಯೂ, ನಂತರದ 5 ಲಕ್ಷ ರೂ. ಶೇ.4ರ ಬಡ್ಡಿ ದರದಲ್ಲೂ ದೊರೆಯಲಿದೆ. ನಾನಾ ಉದ್ಯಮ ಆರಂಭಿಸಲು ಪ್ರಸಕ್ತ ವರ್ಷ 3 ಸ್ವಸಹಾಯ ಸಂಘಗಳಿಗೆ ನೆರವು ನೀಡಲಾಗುವುದು. ಯೋಜನೆಗೆ ಚಾಲನೆ ಸಿಗುವ ಡಿಸೆಂಬರ್ ಮೊದಲನೇ ವಾರ ಸಾವಿರ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಲಾಗುವುದು.

ಏನಿದು ಬಡವರ ಬಂಧು?

ರಾಜ್ಯದ ಸಣ್ಣ-ಪುಟ್ಟ ವರ್ತಕರು, ಸ್ವಯಂ ಉದ್ಯೋಗ ಆಧರಿಸಿರುವವರಿಗೆ ಲಘು ಆರ್ಥಿಕ ನೆರವು ನೀಡುವ ಶೂನ್ಯ ಬಡ್ಡಿವುಳ್ಳ ಸಾಲದ ಯೋಜನೆ ಇದಾಗಿದೆ. ವರ್ತಕರು 2,000 ರೂ.ಗಳಿಂದ 10,000 ರೂ.ಗಳವರೆಗೆ ಸಾಲ ಪಡೆಯಬಹುದು. ಸಾಲ ಪಡೆದ ಮುಂದಿನ 3 ತಿಂಗಳ ಒಳಗಾಗಿ ಪ್ರತಿದಿನ 100 ರೂ.ಗಳಂತೆ ಸಹಕಾರ ಬ್ಯಾಂಕ್​ಗೆ ಹಣ ಮರು ಪಾವತಿ ಮಾಡಬೇಕು. ದಿನವೊಂದಕ್ಕೆ ಕನಿಷ್ಠ 100 ರೂ. ಭರಿಸಬೇಕು. ಸಾಲ ಮರುಪಾವತಿ ಮಾಡಿದ ನಂತರ ಹೊಸ ಸಾಲಕ್ಕೆ ವರ್ತಕರು ಅರ್ಹರಾಗುತ್ತಾರೆ.