ನವೆಂಬರ್ 18 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
7

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಡಿ.2ರಿಂದ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌

ನವದೆಹಲಿ (ಪಿಟಿಐ): ಮೊತ್ತಮೊದಲ ಒಲಿಂಪಿಕ್‌ ಮಾದರಿಯ ಇಂಡಿಯನ್ ಬಾಕ್ಸಿಂಗ್‌ ಲೀಗ್‌ ಡಿಸೆಂಬರ್‌ 2ರಿಂದ 21ರವರೆಗೆ ನಡೆಯಲಿದೆ ಎಂದು ನವೆಂಬರ್ 15 ರ ಶುಕ್ರವಾರ ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

ಎಂ.ಸಿ.ಮೇರಿ ಕೋಮ್‌, ಸೋನಿಯಾ ಲಾಥರ್‌, ಅಮಿತ್‌ ಪಂಘಲ್‌, ಮನೋಜ್‌ಕುಮಾರ್‌ ಸೇರಿದಂತೆ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ ಬಾಕ್ಸರ್‌ಗಳು ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರೊ ಸ್ಪೋರ್ಟಿಫೈ ಹಾಗೂ ಸ್ಪೋರ್ಟ್ಸ್‌ಲೈವ್‌ ಕಂಪೆನಿಯ ಮಾಲೀಕರು ಜಂಟಿಯಾಗಿ ಈ ಟೂರ್ನಿ ನಡೆಸುತ್ತಿದ್ದಾರೆ.
ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ಚಾನೆಲ್‌ನಲ್ಲಿ ಟೂರ್ನಿ ನೇರಪ್ರಸಾರಗೊಳ್ಳಲಿದೆ.

ಟೂರ್ನಿಯು ಮೂರು ನಗರಗಳಲ್ಲಿ ನಡೆಯುವ ಸಾಧ್ಯತೆಯಿದೆ. ಆರು ಫ್ರಾಂಚೈಸ್‌ ತಂಡಗಳು ಭಾಗವಹಿಸಲಿವೆ. 

 

ಟೆನಿಸ್‌ಗೆ ಥಾಮಸ್‌ ಬೆರ್ಡಿಚ್‌ ವಿದಾಯ

ಲಂಡನ್‌ (ಎಎಫ್‌ಪಿ): ಜೆಕ್‌ ಗಣರಾಜ್ಯದ ಆಟಗಾರ ಥಾಮಸ್‌ ಬೆರ್ಡಿಚ್‌ ಶನಿವಾರ ಅಂತರರಾ ಷ್ಟ್ರೀಯ ಟೆನಿಸ್‌ಗೆ ವಿದಾಯ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ಟೂರ್ನಿಯ ವೇಳೆ ಅವರು 17 ವರ್ಷಗಳ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದರು.

ವಿಶ್ವದ 103ನೇ ಕ್ರಮಾಂಕದ ಬೆರ್ಡಿಚ್‌, 13 ಪ್ರಶಸ್ತಿಗಳನ್ನು ಜಯಿಸಿದ್ದಾರೆ. 2015ರಲ್ಲಿ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು.  ಜುಲೈ 2010ರಿಂದ ಅಕ್ಟೋಬರ್‌ 2016ರವರೆಗೆ ಅಗ್ರ 10ರ ಕ್ರಮಾಂಕದಲ್ಲಿದ್ದರು. ಹೋದ ಎರಡು ವರ್ಷಗಳಿಂದ ಬೆನ್ನುನೋವಿನಿಂದ ಬಳಲಿದ್ದರು. 

 

ಐಸಿಸಿ ರ‍್ಯಾಂಕಿಂಗ್‌:ಮಯಂಕ್‌, ಶಮಿ ಶ್ರೇಷ್ಠ ಸಾಧನೆ

ದುಬೈ (ಪಿಟಿಐ): ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಸಾಮರ್ಥ್ಯ ತೋರಿದ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಮತ್ತು ವೇಗಿ ಮೊಹಮ್ಮದ್ ಶಮಿ ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದರು. 

ಇಂದೋರ್‌ನಲ್ಲಿ ನವೆಂಬರ್ 16 ರ ಶನಿವಾರ ಮುಕ್ತಾಯಗೊಂಡ ಟೆಸ್ಟ್‌ನಲ್ಲಿ ಒಟ್ಟು 7 ವಿಕೆಟ್ ಉರುಳಿಸಿದ ಶಮಿ ರ‍್ಯಾಂಕಿಂಗ್‌ನಲ್ಲಿ 8 ಸ್ಥಾನಗಳ ಏರಿಕೆ ಕಂಡಿದ್ದು 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರು ಒಟ್ಟು 790 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಇದು ಭಾರತದ ವೇಗದ ಬೌಲರ್ ಒಬ್ಬನ ಮೂರನೇ ಗರಿಷ್ಠ ಸಾಧನೆಯಾಗಿದೆ. ಕಪಿಲ್ ದೇವ್‌ 877 ಮತ್ತು ಜಸ್‌ಪ್ರೀತ್ ಬೂಮ್ರಾ 832 ಪಾಯಿಂಟ್‌ಗಳನ್ನು ಕಲೆ ಹಾಕಿದ್ದರು.  

ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದ ಮಯಂಕ್ ಅಗರವಾಲ್, ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. 28 ವರ್ಷದ ಅಗರವಾಲ್ ಖಾತೆಯಲ್ಲಿ ಈಗ 691 ರೇಟಿಂಗ್ ಪಾಯಿಂಟ್ಸ್ ಇವೆ. ಆಲ್‌ರೌಂಡರ್ ರವೀಂದ್ರ ಜಡೇಜ 4 ಸ್ಥಾನಗಳ ಬಡ್ತಿಯೊಂದಿಗೆ 35ಕ್ಕೆ ಏರಿದ್ದರೆ, ವೇಗಿ ಇಶಾಂತ್ ಶರ್ಮಾ (20ನೇ ಸ್ಥಾನ) ಮತ್ತು ಉಮೇಶ್ ಯಾದವ್ (22) ತಲಾ ಒಂದೊಂದು ಸ್ಥಾನಗಳ ಏರಿಕೆ ಕಂಡಿದ್ದಾರೆ.  ಆಫ್‌ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್  ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದಾರೆ.