ನವೆಂಬರ್ 18 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
7

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಇಂಡೊನೇಷ್ಯಾ ಓಪನ್‌ ಟೇಬಲ್‌ ಟೆನಿಸ್‌: ಹರ್ಮಿತ್‌ ದೇಸಾಯಿಗೆ ಕಿರೀಟ

ಮುಂಬೈ: ಭಾರತದ ಅನುಭವಿ ಆಟಗಾರ ಹರ್ಮಿತ್‌ ದೇಸಾಯಿ ಅವರು ಐಟಿಟಿಎಫ್‌ ಚಾಲೆಂಜ್‌ ಇಂಡೊನೇಷ್ಯಾ ಓಪನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ನವೆಂಬರ್ 17 ರ ಭಾನುವಾರ ಪ್ರಶಸ್ತಿ ಗೆದ್ದರು. ಇಂಡೊನೇಷ್ಯಾದ ಬಾಟಮ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ತಮ್ಮದೇ ದೇಶದ ಅಮಲ್‌ರಾಜ್‌ ಅಂಥೋನಿ ಅವರನ್ನು ಸೋಲಿಸಿದರು. 

ಜಿದ್ದಾಜಿದ್ದಿನ ಪಂದ್ಯದಲ್ಲಿ ಹರ್ಮಿತ್‌ 11–9, 9–11, 11–9, 11–9, 12–10, 11–9 ರಿಂದ ಗೆದ್ದು ಬೀಗಿದರು. ಅವರು ಈ ವರ್ಷದಲ್ಲಿ ಜಯಿಸಿದ ಎರಡನೇ ಪ್ರಶಸ್ತಿ ಇದು.

ಸೆಮಿಫೈನಲ್‌ನಲ್ಲಿ ಹರ್ಮಿತ್‌ ಅವರು ಹಾಂಗ್‌ಕಾಂಗ್‌ನ ಸಿಯು ಹಾಂಗ್‌ ಲ್ಯಾಮ್‌ ಅವರನ್ನು ಪರಾಭವಗೊಳಿಸಿದ್ದರು. ಪುರುಷರ ಡಬಲ್ಸ್‌ನಲ್ಲಿ ಜೊತೆಯಾಗಿ ಕಣಕ್ಕಿಳಿದಿದ್ದ ಅಮಲ್‌ರಾಜ್‌– ಹರ್ಮಿತ್‌ ಸೆಮಿಫೈನಲ್‌ ತಲುಪಿದ್ದರು.

 

ಬ್ಯಾಡ್ಮಿಂಟನ್‌: ಲೀಗೆ ‘ಚೊಚ್ಚಲ’ ಪ್ರಶಸ್ತಿ

ಹಾಂಗ್‌ಕಾಂಗ್ (ಎಎಫ್‌ಪಿ): ಸೋಲಿನ ಸುಳಿಯಿಂದ ಮೇಲೆದ್ದು ಗೆಲುವಿನ ಸೌಧ ಕಟ್ಟಿದ ಸ್ಥಳೀಯ ಆಟಗಾರ ಲೀ ಚ್ಯೂಕ್ ಯೂ ಅವರು ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಇದು ಲೀ ಅವರಿಗೆ ಪ್ರಮುಖ ಟೂರ್ನಿಯ ಚೊಚ್ಚಲ ಪ್ರಶಸ್ತಿಯಾಗಿದೆ. 

ಭಾನುವಾರ, ಹೊರಗೆ ಬೀದಿ ಬೀದಿಯಲ್ಲಿ ಪ್ರಜಾಪ್ರಭುತ್ವದ ಪರ ಭಾರಿ ಪ್ರತಿಭಟನೆ ನಡೆಯುತ್ತಿರುವಾಗಲೇ ಒಳಗೆ ಪ್ರಬಲ ಪೈಪೋಟಿ ನಡೆದಿತ್ತು. ಇಂಡೊನೇಷ್ಯಾದ ಆ್ಯಂಟನಿ ಜಿಂಟಿಂಗ್ ಎದುರಿನ ಫೈನಲ್ ಪಂದ್ಯದಲ್ಲಿ 23 ವರ್ಷದ ಲೀ 16–21, 21–10, 22–20ರಲ್ಲಿ ಗೆದ್ದರು. ‌

ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಮತ್ತು ಸೆಮಿಫೈನಲ್‌ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಅವರನ್ನು ಮಣಿಸಿ ಲೀ ಗಮನ ಸೆಳೆದಿದ್ದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಚೆನ್‌ ಯೂಫಿ 21–18, 13–21, 21–13ರಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂಟನನ್ ವಿರುದ್ಧ ಗೆದ್ದು ಪ್ರಶಸ್ತಿ ಗೆದ್ದುಕೊಂಡರು. ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಚೊಯ್ ಸೊಲ್ ಗ್ಯೂ ಮತ್ತು ಸಿಯೊ ಸೆಂಗ್ ಜೇ ಜೋಡಿ ಇಂಡೊನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸತ್ಯವಾನ್ ಎದುರು ಗೆದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ಚೀನಾದ ಚೆನ್‌ ಕ್ವಿಂಗ್‌ಚೆನ್ ಮತ್ತು ಜಿಯಾ ಯಿಫಾನ್ ಜೋಡಿ ಚಾಂಗ್‌ ಏ ನಾ ಮತ್ತು ಕಿಮ್‌ ಹೇ ರಿನ್ ಅವರನ್ನು ಸೋಲಿಸಿ ಪ್ರಶಸ್ತಿ ಗಳಿಸಿದರು.