ನವೆಂಬರ್ 17 ರ “ವಾಣಿಜ್ಯ ವಿಭಾಗ”ದ ಪ್ರಚಲಿತ ಘಟನೆಗಳು

0
8

ಈ ಕೆಳಗೆ ವಾಣಿಜ್ಯ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ನ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ

ಮುಂಬೈ: ರಿಲಯನ್ಸ್‌ ಕಮ್ಯುನಿಕೇಷನ್ಸ್‌ನ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಕಂಪನಿಯಲ್ಲಿನ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅನಿಲ್‌ ಅವರ ಜತೆಗೆ ಕಂಪನಿಯಲ್ಲಿನ ಇತರ ‌ನಿರ್ದೇಶಕರುಗಳಾದ ಛಾಯಾ ವಿರಾನಿ, ರೀನಾ ಕರನಿ, ಮಂಜರಿ ಕೇಕರ್‌ ಮತ್ತು ಸುರೇಶ್‌ ರಂಗಾಚಾರ್‌ ಅವರೂ ರಾಜೀನಾಮೆನೀಡಿದ್ದಾರೆ ಎಂದು ಮುಂಬೈ ಷೇರುಪೇಟೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಣಿಕಂಠನ್‌ ವಿ. ಅವರು ಅಕ್ಟೋಬರ್ 4 ರಂದು ಕಂಪನಿಯ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಹುದ್ದೆಗೆ ರಾಜೀನಾಮೆ ನೀಡಿದ್ದು, ಅದಕ್ಕೆ ಕಂಪನಿಯ ಸಾಲಗಾರರ ಸಮಿತಿಯ ಒಪ್ಪಿಗೆ ದೊರೆಯಬೇಕಿದೆ ಎಂದೂ ತಿಳಿಸಿದೆ.

ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಕಂಪನಿಯು 30,142 ಕೋಟಿ ನಷ್ಟ ಅನುಭವಿಸಿದೆ.

 

‘ಬ್ಯಾಂಕ್‌ ಠೇವಣಿ ವಿಮೆ ಹೆಚ್ಚಳಕ್ಕೆ ಕಾನೂನು’

ನವದೆಹಲಿ (ಪಿಟಿಐ): ‘ಬ್ಯಾಂಕ್‌ಗಳಲ್ಲಿನ ಠೇವಣಿಗಳಿಗೆ ಸದ್ಯಕ್ಕೆ ಇರುವ ವಿಮೆ ಪರಿಹಾರ ಮೊತ್ತವನ್ನು ಹೆಚ್ಚಿಸಲು ಕಾನೂನು ಜಾರಿಗೆ ತರಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಹಣಕಾಸು ಸಂಸ್ಥೆ, ಸಹಕಾರಿ ಬ್ಯಾಂಕ್‌ ಮತ್ತು ಬ್ಯಾಂಕ್‌ಗಳು ದಿವಾಳಿ ಎದ್ದ ಅಥವಾ ಆರ್‌ಬಿಐ ಅವುಗಳ ಲೈಸನ್ಸ್‌ ರದ್ದುಪಡಿಸಿದ ಸಂದರ್ಭದಲ್ಲಿ ಬ್ಯಾಂಕ್‌ ಠೇವಣಿಗಳಿಗೆ ಸದ್ಯ, 1 ಲಕ್ಷ ವಿಮೆ ಪರಿಹಾರ ಇದೆ.

ವಿಮೆ ಹೆಚ್ಚಳ ಕುರಿತು, ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ (ಎಫ್‌ಆರ್‌ಡಿಐ) ಮಸೂದೆ ಮಂಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.ಠೇವಣಿ ವಿಮೆ ಪರಿಹಾರ ಮೊತ್ತವನ್ನು ಈ ಹಿಂದೆ 1993ರಲ್ಲಿ 30 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್‌ ಹಗರಣದಿಂದ ಠೇವಣಿದಾರರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಪರಿಗಣಿಸಿ ಮಾತನಾಡಿದ ಅವರು, ‘ಸಹಕಾರಿ ಬ್ಯಾಂಕ್‌ಗಳ ನಿಯಂತ್ರಣಕ್ಕೆ ಅವುಗಳನ್ನು ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ತರಲಾಗುವುದು’ ಎಂದು ಹೇಳಿದ್ದಾರೆ.

‘ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

 

ರಫ್ತು ಶೇ 1.11ರಷ್ಟು ಇಳಿಕೆ

ನವದೆಹಲಿ (ಪಿಟಿಐ): ದೇಶದ ರಫ್ತು ವಹಿವಾಟು ಅಕ್ಟೋಬರ್‌ನಲ್ಲಿ ಶೇ 1.11ರಷ್ಟು ಇಳಿಕೆಯಾಗಿದ್ದು, 1.89 ಲಕ್ಷ ಕೋಟಿಗಳಷ್ಟಾಗಿದೆ.

ಪೆಟ್ರೋಲಿಯಂ, ಚರ್ಮದ ಉತ್ಪನ್ನಗಳು, ಅಕ್ಕಿ ಮತ್ತು ಟೀ ರಫ್ತು ಇಳಿಕೆ ಕಂಡಿರುವುದರಿಂದ ಒಟ್ಟಾರೆ ರಫ್ತು ವಹಿವಾಟು ಕಡಿಮೆಯಾಗಿದೆ.

ಆಮದು ವಹಿವಾಟು ಶೇ 16.31ರಷ್ಟು ಕಡಿಮೆಯಾಗಿದ್ದು, ಮೂರು ವರ್ಷಗಳ ಕನಿಷ್ಠ ಮಟ್ಟವಾದ  2.69 ಲಕ್ಷ ಕೋಟಿಗೆ ತಲುಪಿದೆ. 2016ರ ಜುಲೈ ಬಳಿಕ ಈ ಪ್ರಮಾಣದಲ್ಲಿ ರಫ್ತು ವಹಿವಾಟು ಇಳಿಕೆ ಕಂಡಿದೆ. 

ಚಿನ್ನದ ಆಮದು ಶೇ 5ರಷ್ಟು ಹೆಚ್ಚಾಗಿದ್ದು, 13,248 ಕೋಟಿಗಳಿಗೆ ತಲುಪಿದೆ. ತೈಲ ಆಮದು ಶೇ 32 ರಷ್ಟು ಇಳಿಕೆಯಾಗಿದೆ.

ಇದರಿಂದ ವ್ಯಾಪಾರ ಕೊರತೆ ಅಂತರ  1.29 ಲಕ್ಷ ಕೋಟಿಗಳಿಂದ 79,200 ಕೋಟಿಗಳಿಗೆ ಇಳಿಕೆಯಾಗಿದೆ.

ರಫ್ತು ವಹಿವಾಟು ನಡೆಸುತ್ತಿರುವ ಪ್ರಮುಖ 30 ವಲಯಗಳಲ್ಲಿ 18 ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.

ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿದೆ ಎನ್ನುವುದನ್ನು ರಫ್ತು ವಹಿವಾಟಿನ ಅಂಕಿ–ಅಂಶಗಳು ಸೂಚಿಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಫ್ತು ಉತ್ತೇಜನಾ ಕ್ರಮಗಳಿಂದಾಗಿ ಕೆಲವೇ ತಿಂಗಳುಗಳಲ್ಲಿ ರಫ್ತು ವಹಿವಾಟು ಹೆಚ್ಚಾಗಲಿದೆ’ ಎಂದು ವ್ಯಾಪಾರ ಉತ್ತೇಜನಾ ಮಂಡಳಿಯ ಅಧ್ಯಕ್ಷ ಮೋಹಿತ್‌ ಎಸ್‌. ಹೇಳಿದ್ದಾರೆ.