ನವೆಂಬರ್ 16 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
16

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಪ್ಯಾರಾಲಿಂಪಿಕ್ಸ್‌ಗೆ ಶರದ್‌ ಕುಮಾರ್‌ ಹಾಗೂ ಮರಿಯಪ್ಪನ್‌ 

ದುಬೈ (ಪಿಟಿಐ): ಭಾರತದ ಹೈಜಂಪ್‌ ಪಟುಗಳಾದ ಶರದ್‌ ಕುಮಾರ್‌ ಹಾಗೂ ಮರಿಯಪ್ಪನ್‌ ತಂಗವೇಲು ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು. ನವೆಂಬರ್ 14 ರ ಗುರುವಾರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಮುತ್ತಿಟ್ಟರು.

1.83 ಮೀಟರ್‌ ಎತ್ತರ ಜಿಗಿದ ಎರಡು ಬಾರಿಯ ಏಷ್ಯನ್‌ ಗೇಮ್ಸ್ ಚಾಂಪಿಯನ್‌ ಶರದ್‌, ಋತುವಿನ ಶ್ರೇಷ್ಠ ಸಾಧನೆ ಮಾಡಿದರು. ರಿಯೊ ಪ್ಯಾರಾಲಿಂಪಿಕ್ಸ್ ಚಿನ್ನ ವಿಜೇತ ಮರಿಯಪ್ಪನ್‌ 1.80 ಮೀ. ಸಾಧನೆ ಮಾಡಿ ಮೂರನೇ ಸ್ಥಾನ ಗಳಿಸಿದರು. ಈ ವಿಭಾಗದ ಚಿನ್ನದ ಪದಕ ಅಮೆರಿಕದ ಸ್ಯಾಮ್‌ ಗ್ರೀವ್‌ (1.86 ಮೀ.) ಪಾಲಾಯಿತು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇನ್ನೋರ್ವ ಅಥ್ಲೀಟ್‌ ರಾಮ್‌ಸಿಂಗ್‌ ಪಧಿಯಾ (1.77 ಮೀ.) ಐದನೇ ಸ್ಥಾನ ಗಳಿಸಲಷ್ಟೇ ಶಕ್ತವಾದರು. ವಿಜೇತ ಲಾಲ್‌ ವಿನಯ್‌ಕುಮಾರ್‌ ಪುರುಷರ 400 ಮೀಟರ್‌  ಟಿ44 ಓಟ ವಿಭಾಗದಲ್ಲಿ ಕಂಚು ಗೆದ್ದು ಒಲಿಂಪಿಕ್ಸ್ ಟಿಕೆಟ್‌ ಪಕ್ಕಾ ಮಾಡಿಕೊಂಡರು.

 

ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ ಟೂರ್ನಿ : ರಿಧಿಮಾಗೆ ಪ್ರಶಸ್ತಿ

ಕೋಲ್ಕತ್ತ (ಪಿಟಿಐ): ರಿಧಿಮಾ ದಿಲಾವರಿ ಅವರು ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ ಟೂರ್ನಿಯಲ್ಲಿ  ನವೆಂಬರ್ 15 ರ ಶುಕ್ರವಾರ ಪ್ರಶಸ್ತಿಗೆ ಮುತ್ತಿಕ್ಕಿದರು. ಈ ವರ್ಷದಲ್ಲಿ ಅವರು ಗೆದ್ದ ಐದನೇ ಟ್ರೋಫಿ ಇದು.

ಇಲ್ಲಿನ ರಾಯಲ್‌ ಗಾಲ್ಫ್‌ ಕೋರ್ಸ್ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಅವರು ದೀಕ್ಷಾ ದಾಗರ್‌ ಅವರನ್ನು ಹಿಂದಿಕ್ಕಿದರು. ಈ ಜಯದೊಂದಿಗೆ ರಿಧಿಮಾ ಅವರು ವರ್ಷಾಂತ್ಯದಲ್ಲಿ ಹೀರೊ ವುಮೆನ್ಸ್ ಮೆರಿಟ್‌ ಕ್ರಮಾಂಕದಲ್ಲಿ ಎರಡನೇ ಸ್ಥಾನ ಗಳಿಸಿದರು.

ಮೊದಲ ಸ್ಥಾನವು ಗೌರಿಕಾ ಬಿಷ್ಣೊಯ್‌ ಅವರ ಪಾಲಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಈ ಟೂರ್ನಿಯ ಫೈನಲ್‌ ತಪ್ಪಿಸಿಕೊಂಡರೂ ಕ್ರಮಾಂಕದಲ್ಲಿ ಅಗ್ರಸ್ಥಾನವನ್ನು ಕಳೆದುಕೊಳ್ಳಲಿಲ್ಲ.

ಗೌರಿಕಾ ಬಹುಮಾನ ಮೊತ್ತವಾಗಿ  11 ಲಕ್ಷ 84 ಸಾವಿರ ತಮ್ಮದಾಗಿಸಿಕೊಂಡರೆ, ರಿಧಿಮಾ ಅವರು 11 ಲಕ್ಷ 9 ಸಾವಿರ ಜೇಬಿಗಿಳಿಸಿದರು. ಮೂರನೇ ಕ್ರಮಾಂಕ ಗಳಿಸಿದ ಅಮನ್‌ದೀಪ್‌ ಅವರು  10ಕ್ಷ 55 ಸಾವಿರ ಬಹುಮಾನ ಪಡೆದರು.

 

ಆಶಾಲತಾ ದೇವಿ ಎಎಫ್‌ಸಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ

ಕೌಲಾಲಂಪುರ(ಪಿಟಿಐ): ಭಾರತ ಮಹಿಳಾ ಫುಟ್‌ಬಾಲ್‌ ತಂಡದ ನಾಯಕಿ ಲೊಯಿತಾಂಗ್‌ಬಮ್‌ ಆಶಾಲತಾ ದೇವಿ ಅವರನ್ನು ಎಎಫ್‌ಸಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಇಂಫಾಲ್‌ನ 26 ವರ್ಷದ ಆಶಾ ಲತಾ, ಈ ವರ್ಷ ಭಾರತ ತಂಡವನ್ನು ಒಲಿಂಪಿಕ್‌ ಕ್ವಾಲಿಫೈಯರ್ಸ್ ಎರಡನೇ ಸುತ್ತು ಪ್ರವೇಶಿಸುವಂತೆ ಮಾಡಿದ್ದರು. ಅಲ್ಲದೆ ತಂಡ, 2019ರ ಸ್ಯಾಫ್‌ ಚಾಂಪಿಯನ್‌ಷಿಪ್‌ ಕಿರೀಟ ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಚೀನಾ ಆಟಗಾರ್ತಿ ಲಿ ಯಿಂಗ್ ಹಾಗೂ ಜಪಾನ್ ತಂಡದ ನಾಯಕಿ ಸಾಕಿ ಕುಮಗಾಯ್ ಕೂಡಾ  ಎಎಫ್‌ಸಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಆದವರ ಪಟ್ಟಿಯಲ್ಲಿದ್ದಾರೆ.  ಡಿಸೆಂಬರ್‌ 2ರಂದು ಹಾಂಗ್‌ಕಾಂಗ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.