ನವೆಂಬರ್ 14 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
9

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಜನೇವರಿ. 20ರಿಂದ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌)

ನವದೆಹಲಿ (ಪಿಟಿಐ): ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧು ಸೇರಿದಂತೆ ಪ್ರಮುಖ ಬ್ಯಾಡ್ಮಿಂಟನ್‌ ತಾರೆಯರು, ಬರುವ ಜನವರಿ 20ರಿಂದ ನಡೆಯುವ ಐದನೇ ವರ್ಷದ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌)ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 21 ದಿನಗಳ ಲೀಗ್‌ನಲ್ಲಿ ಎಂಟು ತಂಡಗಳು ಭಾಗವಹಿಸಲಿವೆ.‌

ಫೆಬ್ರುವರಿ 9ರವರೆಗೆ ನಡೆಯುವ ಈ ಬಾರಿಯ ಲೀಗ್‌ನ ಪಂದ್ಯಗಳನ್ನು ಚೆನ್ನೈ, ದೆಹಲಿ, ಲಖನೌ ಮತ್ತು ಬೆಂಗಳೂರಿನಲ್ಲಿ ನಡೆಸಲಾಗುವುದು.ಲೀಗ್‌ನ ಒಟ್ಟು ಬಹುಮಾನ ಮೊತ್ತ 6 ಕೋಟಿ. ವಿಜೇತ ತಂಡ 3 ಕೋಟಿ ಜೇಬಿಗಿಳಿಸಲಿದೆ.

ಕಿಡಂಬಿ ಶ್ರೀಕಾಂತ್‌ ನಾಯಕತ್ವದ ಬೆಂಗಳೂರು ರ‍್ಯಾಪ್ಟರ್ಸ್ ಕಳೆದ ಬಾರಿ ಚಾಂಪಿಯನ್ ಆಗಿತ್ತು. ಅದಕ್ಕಿಂತ ಹಿಂದಿನ ಆವೃತ್ತಿಗಳಲ್ಲಿ ಹೈದರಾಬಾದ್‌ ಹಂಟರ್ಸ್‌, ಚೆನ್ನೈ ಸ್ಮ್ಯಾಷರ್ಸ್‌, ಡೆಲ್ಲಿ ಡ್ಯಾಷರ್ಸ್‌ ಮತ್ತು ಹೈದರಾಬಾದ್‌ ಹಾಟ್‌ಶಾಟ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದವು.

 

ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ : ಕರ್ನಾಟಕದ ಸ್ಪರ್ಧಿಗಳಿಗೆ ಆರು ಪದಕ

ಹುಬ್ಬಳ್ಳಿ : ಕರ್ನಾಟಕದ ಸೈಕ್ಲಿಸ್ಟ್ ಗಳು ನವೆಂಬರ್ 13 ರ ಬುಧವಾರ ಬಿಕಾನೇರ್ ನಲ್ಲಿ ಆರಂಭವಾದ 24 ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ ನಲ್ಲಿ ಮೂರು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳನ್ನು ಜಯಿಸಿದ್ದಾರೆ.‌

ಭಾರತ ಸೈಕ್ಲಿಂಗ್ ಫೆಡರೇಷನ್ ಹಾಗೂ ಭಾರತೀಯ ರೈಲ್ವೆ ಕ್ರೀಡಾ ಮಂಡಳಿಯ ಸಹಯೋಗದೊಂದಿಗೆ ಆಯೋಜನೆಯಾಗಿರುವ ನಾಲ್ಕು ದಿನಗಳ ಚಾಂಪಿಯನ್ ಷಿಪ್ ಇದಾಗಿದೆ.

ಪುರುಷರ ವಿಭಾಗದ 40 ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್ಸ್ ನಲ್ಲಿ ಬೆಂಗಳೂರಿನ ನವೀನ್ ಜಾನ್ 50 ನಿಮಿಷ 15,782 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

18 ವರ್ಷದೊಳಗಿನ ಬಾಲಕಿಯರ ವಿಭಾಗದ 20 ಕಿ.ಮೀ ವೈಯಕ್ತಿಕ  ಟೈಮ್ ಟ್ರಯಲ್ಸ್ ನಲ್ಲಿ ವಿಜಯಪುರದ ಸೌಮ್ಯಾ ಅಂತಾಪುರ 31 ನಿಮಿಷ 12,500 ಸೆಕೆಂಡ್ ಗಳಲ್ಲಿ ಗುರಿ ಚಿನ್ನ ಜಯಿಸಿದರು. ರಾಜ್ಯಕ್ಕೆ ಇನ್ನೊಂದು ಚಿನ್ನ ಅನುಪಮಾ ಗುಳೇದ ತಂದುಕೊಟ್ಟರು.

14 ವರ್ಷದೊಳಗಿನ ಬಾಲಕಿಯರ ವಿಭಾಗದ  10 ಕಿ.ಮೀ ವೈಯಕ್ತಿಕ  ಟೈಮ್ ಟ್ರಯಲ್ಸ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ ಅನುಪಮಾ 16 ನಿಮಿಷ 08,602 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು.

23 ವರ್ಷದೊಳಗಿನ ಪುರುಷರ ವಿಭಾಗದ  40 ಕಿ.ಮೀ ವೈಯಕ್ತಿಕ  ಟೈಮ್ ಟ್ರಯಲ್ಸ್ ನಲ್ಲಿ ಜಿ.ಟಿ. ಗಗನ ರೆಡ್ಡಿ 54 ನಿಮಿಷ 22,356 ಸೆಕೆಂಡ್ ನಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು

14 ವರ್ಷದೊಳಗಿನ ಬಾಲಕರ ವಿಭಾಗದ  15 ಕಿ.ಮೀ ವೈಯಕ್ತಿಕ  ಟೈಮ್ ಟ್ರಯಲ್ಸ್ ನಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ರಾಘವೇಂದ್ರ ವಂದಾಲ (23 ನಿಮಿಷ 14,147 ಸೆಕೆಂಡು) ಕಂಚಿನ ಪದಕವನ್ನು ಗೆದ್ದುಕೊಂಡರು.

16 ವರ್ಷದೊಳಗಿನ ಬಾಲಕರ ವಿಭಾಗದ  20 ಕಿ.ಮೀ ವೈಯಕ್ತಿಕ  ಟೈಮ್ ಟ್ರಯಲ್ಸ್ ನಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ ಯಾದವಾಡ (28 ನಿಮಿಷ 16,128 ಸೆಕೆಂಡು) ಕಂಚಿನ ಪದಕವನ್ನು ಗೆದ್ದುಕೊಂಡರು.