ನವೆಂಬರ್ 12 ರ “ವಾಣಿಜ್ಯ ವಿಭಾಗ”ದ ಪ್ರಚಲಿತ ಘಟನೆಗಳು

0
8

ಈ ಕೆಳಗೆ ವಾಣಿಜ್ಯ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಕಪ್ಪುಹಣ ಘೋಷಣೆಗೆ ಯೋಜನೆ ಸಾಧ್ಯತೆ

ನವದೆಹಲಿ: ನೇರ ತೆರಿಗೆ ಸಂಗ್ರಹವು ಅಂದಾಜಿಗಿಂತಲೂ ಕಡಿಮೆ ಆಗಲಿದೆ. ಹೀಗಾಗಿ ಕೇಂದ್ರ ಸರ್ಕಾರವು ತೆರಿಗೆ ತಪ್ಪಿಸುವವರಿಗೆ ‘ಆದಾಯ ಘೋಷಣೆ ಯೋಜನೆ’ಯನ್ನು (ಐಡಿಎಸ್‌) ಜಾರಿಗೊಳಿಸುವ ಸಾಧ್ಯತೆ ಇದೆ.

ತೆರಿಗೆ ಮತ್ತು ದಂಡ ಪಾವತಿಸುವ ಮೂಲಕ ಕಪ್ಪುಹಣ ಮತ್ತು ಅಕ್ರಮ ಆಸ್ತಿ ಘೋಷಣೆ ಮಾಡಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶ ಲಭ್ಯವಾಗಲಿದೆ. 

2016ರಲ್ಲಿ ಈ ಯೋಜನೆಯ ಮೂಲಕ  65 ಸಾವಿರ ಕೋಟಿ ಕಪ್ಪುಹಣ ಘೋಷಣೆಯಾಗಿತ್ತು. ಈ ಬಾರಿ 50 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

ಕಳೆದ ಬಾರಿ ಶೇ 45ರಷ್ಟು ತೆರಿಗೆ ಮತ್ತು ದಂಡ ಕಟ್ಟಿ ಅಕ್ರಮ ಆಸ್ತಿ ಮತ್ತು ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ಹಲವು ವರ್ಷಗಳಿಂದ ‌ಬಹಳಷ್ಟು ಸಿರಿವಂತರು ತಮ್ಮ ನೈಜ ಆದಾಯ ಮತ್ತು ಆಸ್ತಿಗಳ ಮಾಹಿತಿಯನ್ನು ಘೋಷಿಸಿಕೊಂಡಿಲ್ಲ’ ಎಂದು ಅಧಿಕಾರಿ ಮೂಲಗಳು ಪ್ರಜಾವಾಣಿಗೆ ಮಾಹಿತಿ ನೀಡಿವೆ.

ನೇರ ತೆರಿಗೆ ಮೂಲಕ 13.35 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದುವರೆಗೆ 5.2 ಲಕ್ಷ ಕೋಟಿ ಮಾತ್ರವೇ ಸಂಗ್ರಹವಾಗಿದೆ. ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ತೆರಿಗೆ ಸಂಗ್ರಹವು ಶೇ 3ರಷ್ಟು ಅಲ್ಪ ಪ್ರಗತಿ ಕಂಡಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ ಆಗುತ್ತಿರುವುದರಿಂದ ಒಟ್ಟಾರೆ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರುವ ಅಂದಾಜು ಮಾಡಲಾಗಿದೆ.

 

ಸರ್ಕಾರಿ ಸಾಲಪತ್ರಗಳತ್ತ ಹೆಚ್ಚಿದ ಮ್ಯೂಚುವಲ್‌ ಫಂಡ್‌ ಒಲವು

ಬೆಂಗಳೂರು: ಮ್ಯೂಚುವಲ್‌ ಫಂಡ್‌ (ಎಂಎಫ್‌) ಸಂಸ್ಥೆಗಳು ಕಾರ್ಪೊರೇಟ್‌ ಸಾಲಪತ್ರಗಳಿಗಿಂತಲೂ ಸರ್ಕಾರಿ ಸಾಲ ಪತ್ರಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿವೆ.

‘ಯಾವುದೇ ರೀತಿಯ ನಷ್ಟ ಎದುರಿಸಲು ಇಷ್ಟಪಡದೇ ಇರುವುದರಿಂದ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿವೆ.  ರಿಯಲ್‌ ಎಸ್ಟೇಟ್‌ ವಲಯವು ಮಂದಗತಿ ಬೆಳವಣಿಗೆ ಕಾಣುತ್ತಿದ್ದು, ಬಂಡವಾಳ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ಮ್ಯೂಚುವಲ್‌ ಫಂಡ್‌ನ ನಿಧಿ ನಿರ್ವಾಹಕರು ಸಹ ಇದರತ್ತ ಗಮನ ನೀಡುತ್ತಿಲ್ಲ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಉಮೇಶ್‌ ಮೆಹ್ತಾ ಹೇಳಿದ್ದಾರೆ.

ಕಾರ್ಪೊರೇಟ್‌ ಸಾಲಪತ್ರಗಳ ಮೇಲಿನ ಹೂಡಿಕೆಯು 2018ರ ಜುಲೈನ ಬಳಿಕ ಶೇ 29.8ರಷ್ಟು ಕಡಿಮೆಯಾಗಿದೆ. ರಿಯಲ್ ಎಸ್ಟೇಟ್‌ ಮತ್ತು ಎನ್‌ಬಿಎಫ್‌ಸಿ ಸಾಲಪತ್ರಗಳ ಮೇಲಿನ ಹೂಡಿಕೆ ಕ್ರಮವಾಗಿ ಶೇ 80.9 ಮತ್ತು ಶೇ 42.7ರಷ್ಟು ಇಳಿಕೆಯಾಗಿದೆ ಎಂದು ಸೆಬಿಯಲ್ಲಿ ಮಾಹಿತಿ ಇದೆ.