ನರೇಂದ್ರ ಮೋದಿ ಕುರಿತ ಪುಸ್ತಕ: ತರೂರ್‌ಗೂ ಒಂದು ಅಧ್ಯಾಯ (ಚುನಾವಣೆಗೂ ಮುನ್ನ ಮಾರುಕಟ್ಟೆಗೆ ಲಗ್ಗೆ)

0
678

ಪ್ರಧಾನಿ ನರೇಂದ್ರ ಮೋದಿ ಸಾಧನೆಗಳನ್ನು ಬಿಂಬಿಸುವ ಪುಸ್ತಕವೊಂದರಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಕುರಿತು ಒಂದು ಇಡೀ ಅಧ್ಯಾಯ ಮೀಸಲಿಡಲಾಗಿದೆ.

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಸಾಧನೆಗಳನ್ನು ಬಿಂಬಿಸುವ ಪುಸ್ತಕವೊಂದರಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಕುರಿತು ಒಂದು ಇಡೀ ಅಧ್ಯಾಯ ಮೀಸಲಿಡಲಾಗಿದೆ.

ಬಿಜೆಪಿ ತರಬೇತಿ ಕೇಂದ್ರ ಸಮಿತಿ ಸದಸ್ಯ ಮತ್ತು ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್‌’ ವಾರಪತ್ರಿಕೆಯ ಮಾಜಿ ಸಂಪಾದಕ ಆರ್‌. ಬಾಲಶಂಕರ ಬರೆದಿರುವ ಈ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.

‘ನರೇಂದ್ರ ಮೋದಿ: ಕ್ರಿಯೇಟಿವ್‌ ಡಿಸ್‌ರಪ್ಟರ್‌, ದಿ ಮೇಕರ್‌ ಆಫ್‌ ನ್ಯೂ ಇಂಡಿಯಾ’ ಎಂಬ ಹೆಸರಿನ ಈ ಪುಸ್ತಕವು ದೇಶದ ರಾಜಕೀಯದಲ್ಲಿ ಮೋದಿ ಪ್ರಭಾವ ಹಾಗೂ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಲಿದೆ.

ತರೂರ್‌ಗೆ ಅಧ್ಯಾಯ ಮೀಸಲು: ಪ್ರಧಾನಿ ಕುರಿತು ಶಶಿ ತರೂರ್‌ ಬರೆದ ‘ದಿ ಪ್ಯಾರಾಡಾಕ್ಸಿಯಲ್‌ ಪ್ರೈಮ್‌ ಮಿನಿಸ್ಟರ್‌: ನರೇಂದ್ರ ಮೋದಿ ಅಂಡ್‌ ಹಿಸ್‌ ಇಂಡಿಯಾ’ ಪುಸ್ತಕ ಓದಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಬಾಲಶಂಕರ ತಿಳಿಸಿದ್ದಾರೆ.

ಪ್ಯಾರಾಡಾಕ್ಸಿಯಲ್‌ ಪ್ರೈಮ್‌ ಮಿನಿಸ್ಟರ್‌ ಪುಸ್ತಕದಲ್ಲಿ ಮೋದಿ ವಿರುದ್ಧ ಮಾಡಿರುವ ಆರೋಪ ಮತ್ತು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ‘ತರೂರ್‌ ಅವರನ್ನು ಆವರಿಸಿರುವ ಮೋದಿ’ ಎಂಬ ಅಧ್ಯಾಯ ಬರೆದಿದ್ದಾಗಿ ಅವರು ಹೇಳಿದ್ದಾರೆ.

ಶಾ ಮುನ್ನುಡಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುನ್ನುಡಿ ಬರೆದಿದ್ದು, ಹಣಕಾಸು ಸಚಿವ ಅರುಣ್‌ ಜೇಟ್ಲಿ ಪುಸ್ತಕ ಪರಿಚಯಿಸಿದ್ದಾರೆ. ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಂದೇಶ 
ನೀಡಿದ್ದಾರೆ.

‘ದೇಶದ ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಯ ಕುರಿತು ಲೇಖಕರು ವ್ಯಕ್ತಪಡಿಸಿರುವ ಎಲ್ಲ ಅಭಿಪ್ರಾಯ
ಗಳನ್ನು ಸಾರಾಸಗಟಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಶಾ ಮುನ್ನುಡಿಯಲ್ಲಿ ಹೇಳಿದ್ದಾರೆ.

ಚುನಾವಣೆಗೂ ಮುನ್ನ ಲಕ್ಷ ಪ್ರತಿ!

300 ಪುಟಗಳ ಪುಸ್ತಕವನ್ನು ಕೊನಾರ್ಕ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಆನ್‌ಲೈನ್‌ನಲ್ಲಿಯೂ ದೊರೆಯಲಿದೆ. 17 ಅಧ್ಯಾಯಗಳಿದ್ದು ಮೋದಿ ಅವರ 40 ಅಪರೂಪದ ಛಾಯಾಚಿತ್ರ
ಗಳನ್ನು ಬಳಸಲಾಗಿದೆ.

ಡಿಸೆಂಬರ್‌ ಎರಡನೇ ವಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ದೆಹಲಿಯಲ್ಲಿ ಇಂಗ್ಲಿಷ್‌ ಆವೃತ್ತಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

2019ರ ಲೋಕಸಭಾ ಚುನಾವಣೆ ಒಳಗಾಗಿ ಭಾರತದ ಇತರ ‍ಪ್ರಾದೇಶಿಕ ಭಾಷೆಗಳಲ್ಲಿಯೂ ಪುಸ್ತಕ ಪ್ರಕಟವಾಗಲಿದೆ. ಹಿಂದಿ, ಗುಜರಾತಿ, ಪಂಜಾಬಿ, ಮರಾಠಿ, ತಮಿಳು, ಕನ್ನಡ ಮತ್ತು ಮಲಯಾಳ ಭಾಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರತಿ ಅಚ್ಚು ಹಾಕಿಸುವ ಯೋಚನೆ ಇದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಮತ್ತು ಅಮಿತ್‌ ಶಾ ಒಡನಾಟ, ರಫೇಲ್‌ ಒಪ್ಪಂದ, ನೋಟು ರದ್ದು, ವಿದೇಶಾಂಗ ನೀತಿ, ಬ್ಯಾಂಕ್‌ಗಳ ವಾಪಸಾಗದ ಸಾಲ (ಎನ್‌ಪಿಎ) ಸಮಸ್ಯೆ, ಪ್ರಶಸ್ತಿ ವಾಪಸ್‌ ಚಳವಳಿ, ಅಸಹಿಷ್ಣುತೆ ಮುಂತಾದ ವಿಷಯಗಳ ಬಗ್ಗೆ ಪುಸ್ತಕ ಹೊಸ ಒಳನೋಟ ನೀಡಲಿದೆ ಎಂದು ಹೇಳಲಾಗಿದೆ.