ನದಿಗಳ ಉಳಿಸಲು ಪಣ :(ಉನ್ನತಾಧಿಕಾರ ಸಮಿತಿ ರಚಿಸಿದ ರಾಜ್ಯ ಸರ್ಕಾರ; ಕ್ರಿಯಾಯೋಜನೆಗೆ ಸೂಚನೆ)

0
302

ಕೋಟಿಗಟ್ಟಲೆ ಲೀಟರ್ ತ್ಯಾಜ್ಯ ನೀರು ಒಡಲು ಸೇರುತ್ತಿರುವುದರಿಂದ ಕಲುಷಿತಗೊಂಡಿರುವ ಹಾಗೂ ಬತ್ತಿ ಹೋಗುತ್ತಿರುವ ರಾಜ್ಯದ ‌17 ನದಿಗಳ ಶುದ್ಧೀಕರಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು: ಕೋಟಿಗಟ್ಟಲೆ ಲೀಟರ್ ತ್ಯಾಜ್ಯ ನೀರು ಒಡಲು ಸೇರುತ್ತಿರುವುದರಿಂದ ಕಲುಷಿತಗೊಂಡಿರುವ ಹಾಗೂ ಬತ್ತಿ ಹೋಗುತ್ತಿರುವ ರಾಜ್ಯದ ‌17 ನದಿಗಳ ಶುದ್ಧೀಕರಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಾಲ್ವರು ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಎರಡು ತಿಂಗಳಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಹಾಗೂ ಆರು ತಿಂಗಳಲ್ಲಿ ಪ್ರಗತಿ ತೋರಿಸಬೇಕು ಎಂದು ಸಮಿತಿಗೆ ಸೂಚಿಸಿದೆ.

ದೇಶದ 351 ನದಿಗಳು ಕಲುಷಿತಗೊಂಡಿವೆ. ಅದರಲ್ಲಿ ರಾಜ್ಯದ 17 ನದಿಗಳು ಸೇರಿವೆ. ಈ ಜಲಮೂಲಗಳಲ್ಲಿ
ಜೀವರಾಸಾಯನಿಕ ಆಮ್ಲಜನಕ ಬೇಡಿಕೆ (ಬಿಒಡಿ) ಪ್ರಮಾಣ ಲೀಟರ್‌ಗೆ 3 ಎಂ.ಜಿ.ಗಿಂತ ಜಾಸ್ತಿ ಇದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಹಿರಂಗಪಡಿಸಿತ್ತು. ಈ ವಿಚಾರ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಮೆಟ್ಟಿಲೇರಿತ್ತು. ನದಿಗಳ ಪುನರುಜ್ಜೀವನಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಎನ್‌ಜಿಟಿ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿತ್ತು.

ಡಿಸೆಂಬರ್ 3ಕ್ಕೆ ಸಭೆ: ‘ವರ್ಷದೊಳಗೆ ನದಿಗಳ ಮಾಲಿನ್ಯ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಸಬೇಕು ಎಂದು ಯೋಜಿಸಿದ್ದೇವೆ. ಅದಕ್ಕೆ ದೊಡ್ಡ ಮೊತ್ತದ ಅನುದಾನವೂ ಬೇಕು.
ಈ ದಿಸೆಯಲ್ಲಿ ಚರ್ಚಿಸಲು ಡಿ. 3ರಂದು ಜಲಸಂಪನ್ಮೂಲ, ಅರಣ್ಯ, ಕೃಷಿ ಹಾಗೂ ನೀರಾವರಿ ಮಂಡಳಿಗಳ ಪ್ರಮುಖರಸಭೆ ಕರೆಯಲಾಗಿದೆ’ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

ಸಮಿತಿಯ ಜವಾಬ್ದಾರಿ

lಕಲುಷಿತಗೊಂಡಿರುವ ನದಿಗಳ ಹಾನಿಕಾರಕ ಅಂಶಗಳನ್ನು ಹೊರತೆಗೆದು, ಅವುಗಳನ್ನು ಸ್ನಾನಕ್ಕೆ ಬಳಕೆಯಾಗುವ ಸ್ಥಿತಿಗೆ ಪರಿವರ್ತಿಸಬೇಕು.

lಮಾಲಿನ್ಯ ಉಂಟುಮಾಡುವ ಪ್ರದೇಶಗಳನ್ನು ಗುರುತಿಸುವುದು, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಿತಿಗತಿ, ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಪರಿಶೀಲನೆ.

lಅಂತರ್ಜಲ ಮರುಪೂರಣ, ಉತ್ತಮ ನೀರಾವರಿ ವ್ಯವಸ್ಥೆ, ಪ್ರವಾಹಪೀಡಿತ ಪ್ರದೇಶಗಳ ನಿರ್ವಹಣೆ ಹಾಗೂ ಸಂರಕ್ಷಣೆ, ಮಳೆ ನೀರು ಸಂಗ್ರಹ ವ್ಯವಸ್ಥೆ, ನದಿಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡಲು ಯೋಜನೆ ರೂಪಿಸುವುದು.

ನದಿಗಳ ಪುನರುಜ್ಜೀವನದ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಡಿಸೆಂಬರ್‌ 15ಕ್ಕೆ ಸಲ್ಲಿಸುತ್ತೇವೆ

   – ಲಕ್ಷ್ಮಣ್‌, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ