ನಕಲಿ ಡಿಗ್ರಿ; ಡಿಎಸ್‌ಪಿ ಹುದ್ದೆಯಿಂದ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್‌ ವಜಾ

0
48

ನಕಲಿ ಪದವಿ ಸರ್ಟಿಫಿಕೇಟ್‌ಗಳನ್ನು ಹಾಜರುಪಡಿಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್‌ ಅವರನ್ನು ಪಂಜಾಬ್ ಪೊಲೀಸ್ ಇಲಾಖೆ ಉಪ ಅಧೀಕ್ಷಕಿ (ಡಿಎಸ್‌ಪಿ) ಹುದ್ದೆಯಿಂದ ವಜಾಗೊಳಿಸಲಾಗಿದೆ.

ಹೊಸದಿಲ್ಲಿ: ನಕಲಿ ಪದವಿ ಸರ್ಟಿಫಿಕೇಟ್‌ಗಳನ್ನು ಹಾಜರುಪಡಿಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್‌ ಅವರನ್ನು ಪಂಜಾಬ್ ಪೊಲೀಸ್ ಇಲಾಖೆ ಉಪ ಅಧೀಕ್ಷಕಿ (ಡಿಎಸ್‌ಪಿ) ಹುದ್ದೆಯಿಂದ ವಜಾಗೊಳಿಸಲಾಗಿದೆ. 

ಪದವಿ ಪ್ರಮಾಣಪತ್ರಕ್ಕೆ ಸಂಬಂಧಪಟ್ಟಂತೆ ವಿಶ್ವ ವಿದ್ಯಾಲಯ ಜತೆ ಪರಿಶೀಲನೆ ನಡೆಸಿದಾಗ ಡಿಗ್ರಿ ಸರ್ಟಿಫಿಕೇಟ್ ನಕಲಿ ಎಂಬುದು ಕಂಡುಬಂದಿದೆ. 

ಮಾರ್ಚ್ 1ರಂದು ಚಂಡೀಗಢದಲ್ಲಿ ನಡೆದ ಸಮಾರಂಭದಲ್ಲಿ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮತ್ತು ಡಿಜಿಪಿ ಸುರೇಶ್‌ ಅರೋರ, ಕ್ರಿಕೆಟ್‌ ತಾರೆ ಹರ್ಮನ್‌ಪ್ರೀತ್‌ ಅವರಿಗೆ ಡಿಎಸ್‌ಪಿ ಹುದ್ದೆ ಜವಾಬ್ದಾರಿ ನೀಡಿದರು. 

ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವ ವಿದ್ಯಾಲಯದಲ್ಲಿ 2011ರಲ್ಲಿ ಪದವಿ ಪಡೆದಿರುವ ಪ್ರಮಾಣ ಪತ್ರವನ್ನು ಹರ್ಮನ್ ಹಾಜರು ಪಡಿಸಿದ್ದರು. ಇದೀಗ ಪ್ರಮಾಣ ಪತ್ರಗಳು ನಕಲಿ ಎಂಬುದು ಕಂಡುಬಂದಿರುವುದಿರಿಂದ ಆಕೆಯ ವಿದ್ಯಾಭ್ಯಾಸ ಅರ್ಹತೆಯನ್ನು XII ಎಂದು ಮಾತ್ರ ಪರಿಗಣಿಸಲಾಗುವುದು. ಹಾಗಾಗಿ ಕಾನ್‌ಸ್ಟೇಬಲ್ ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಹಾಗಿದ್ದರೂ ಭಾರತ ಸರಕಾರದಿಂದ ಅರ್ಜುನ ಪ್ರಶಸ್ತಿಗೂ ಭಾಜನವಾಗಿರುವ ಹರ್ಮನ್ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆಗಗಳನ್ನು ಪರಿಗಣಿಸಿ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರಲು ಪಂಜಾಬ್ ಸರಕಾರ ನಿರ್ಧರಿಸಿದೆ. ಹಾಗೊಂದು ವೇಳೆ ಕ್ರಿಮಿನಲ್ ಕೇಸು ದಾಖಲಿಸಿದ್ದಲ್ಲಿ ಹರ್ಮನ್‍‌ಗೆ ಅರ್ಜುನ ಪ್ರಶಸ್ತಿ ನಷ್ಟವಾಗುವ ಭೀತಿಯಿದೆ. 

ಈ ನಡುವೆ ಅನಾರೋಗ್ಯದ ಕಾರಣ ಒಡ್ಡಿರುವ ಹರ್ಮನ್, ಯಾವುದೇ ಪ್ರತಿಕ್ರಿಯೆಗಳನ್ನು ನೀಡಲು ನಿರಾಕರಿಸಿದ್ದಾರೆ. 

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿ ಗೆಲ್ಲುವಲ್ಲಿ ಹರ್ಮನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಳಿಕ ಭಾರತೀಯ ರೈಲ್ವೆ ಜತೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮುಖ್ಯಮಂತ್ರಿ ವಿನಂತಿ ಮೇರೆಗೆ ಮೂರು ವರ್ಷಗಳಲ್ಲೇ ರೈಲ್ವೆ ಇಲಾಖೆ ತೊರೆದು ಪಂಜಾಬ್ ಪೊಲೀಸ್ ಉಪ ಅಧೀಕ್ಷಕಿ ಹುದ್ದೆ ವಹಿಸಿಕೊಂಡಿದ್ದರು.