ನಕಲಿ ಕಂಪನಿಗಳ ವಿರುದ್ಧ ಕೇಂದ್ರದ ಸಮರ: 21 ಲಕ್ಷ ಡೈರೆಕ್ಟರ್‌ಗಳಿಗೆ ಬಂತು ಸಂಕಷ್ಟ

0
378

ನಕಲಿ ಕಂಪನಿಗಳನ್ನು ಗುರ್ತಿಸಿ ಅಕ್ರಮ ವಹಿವಾಟನ್ನು ತಡೆಯುವ ಕೇಂದ್ರ ಸರಕಾರದ ಸಮರ ಮುಂದುವರಿದಿದೆ. ನಾನಾ ಕಂಪನಿಗಳ ಸುಮಾರು 21 ಲಕ್ಷ ನಿರ್ದೇಶಕರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಸದಿಲ್ಲಿ: ನಕಲಿ ಕಂಪನಿಗಳನ್ನು ಗುರ್ತಿಸಿ ಅಕ್ರಮ ವಹಿವಾಟನ್ನು ತಡೆಯುವ ಕೇಂದ್ರ ಸರಕಾರದ ಸಮರ ಮುಂದುವರಿದಿದೆ. ನಾನಾ ಕಂಪನಿಗಳ ಸುಮಾರು 21 ಲಕ್ಷ ನಿರ್ದೇಶಕರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನಕಲಿ ಕಂಪನಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇದರ ಒಂದು ಭಾಗವಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಲು ಕಂಪನಿಗಳ ನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಸೆಪ್ಟೆಂಬರ್ 15 ರ ಗಡುವು ಮುಕ್ತಾಯವಾಗಿದ್ದು, ದೇಶದ 33 ಲಕ್ಷ ನಿರ್ದೇಶಕರ ಪೈಕಿ 21 ಲಕ್ಷ ಮಂದಿ ಕೆವೈಸಿ ವಿವರಗಳನ್ನು ದಾಖಲಿಸಿಲ್ಲ. ಇಂಥವರ ನಿರ್ದೇಶಕತ್ವವು ರದ್ದಾಗಲಿದ್ದು, ಇವರು ‘ಡಮ್ಮಿ’ ನಿರ್ದೇಶಕರೇ ಎನ್ನುವ ನಿಟ್ಟಿನಲ್ಲಿ ಸರಕಾರ ತನಿಖೆ ನಡೆಸಲಿದೆ. 

ನೋಂದಾಯಿತ ಕಂಪನಿಯ ಅರ್ಹ ನಿರ್ದೇಶಕರಿಗೆ ಸರಕಾರವು ‘ನಿರ್ದೇಶಕರ ಗುರುತು ಸಂಖ್ಯೆ’ಯನ್ನು(ಡಿಐಎನ್‌) ನೀಡುತ್ತದೆ. ಈ ವಿಶಿಷ್ಠ ಸಂಖ್ಯೆಯನ್ನು ನೀಡುವ ಸಲುವಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಗಡುವಿನಲ್ಲಿ ವಿವರ ಸಲ್ಲಿಸದ ನಿರ್ದೇಶಕರ ಹುದ್ದೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದಾಗ್ಯೂ, ಅಸಲಿ ನಿರ್ದೇಶಕರು ಸಕಾರಣದ ಮನವಿಯೊಂದಿಗೆ ವಿವರಗಳನ್ನು ಸಲ್ಲಿಸಿದರೆ 5000 ರೂ. ಶುಲ್ಕವನ್ನು ಪಡೆದು ಸರಕಾರವು ನಿರ್ದೇಶಕತ್ವವನ್ನು ಮರು ಸಕ್ರಿಯಗೊಳಿಸುತ್ತದೆ. 

ನಕಲಿ ಕಂಪನಿಗಳ ಪತ್ತೆಗೆ ಕಾರ್ಪೊರೇಟ್‌ ವ್ಯವಹಾರ ಸಚಿವಾಲಯವು ಅನುಸರಿಸಿರುವ ಹೊಸ ನಡೆ ಇದಾಗಿದ್ದು, ಅನುಮಾನಾಸ್ಪದ ವಹಿವಾಟಿನ ಸುಳಿವು ಸಿಕ್ಕಿದರೆ ಕಂಪನಿಗಳ ವಿರುದ್ಧ ತನಿಖೆ ನಡೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

”ಕಳೆದ ಜೂನ್‌ನಲ್ಲಿ ಈ ಕೆವೈಸಿ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. 33 ಲಕ್ಷ ಸಕ್ರಿಯ ನಿರ್ದೇಶಕರ ಪೈಕಿ ಕೇವಲ 12.16 ಲಕ್ಷ ನಿರ್ದೇಶಕರಷ್ಟೇ ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. 21 ಲಕ್ಷ ಉಳಿಕೆ ನಿರ್ದೇಶಕರು ಕೆವೈಸಿ ಪ್ರಕ್ರಿಯೆಯಲ್ಲಿ ವಿಫಲರಾಗಿದ್ದಾರೆ. ಇಂಥವರ ಡಿಐಎನ್‌ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ವಾರದೊಳಗೆ ಮುಗಿಯಲಿದೆ,” ಎಂದು ಸಚಿವಾಲಯ ಹೇಳಿದೆ. 

ಕಳೆದ ವರ್ಷ ಸಚಿವಾಲಯವು ಸುಮಾರು 3 ಲಕ್ಷ ಜನರ ನಿರ್ದೇಶಕತ್ವವನ್ನು ರದ್ದುಗೊಳಿಸಿತ್ತು. ಈ ನಿಷ್ಕ್ರಿಯ ನಿರ್ದೇಶಕರನ್ನು ಒಳಗೊಂಡ ಕಂಪನಿಗಳು ಸುದೀರ್ಘ ಕಾಲದಿಂದ ವ್ಯವಹಾರ ನಡೆಸದಿರುವುದು ನಂತರದ ತನಿಖೆ ವೇಳೆ ಬಯಲಾಗಿತ್ತು.