ನಕಲಿ ಎನ್​ಕೌಂಟರ್​ ಪ್ರಕರಣದಲ್ಲಿ ಏಳು ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ

0
217

ಆಸ್ಸಾಂನಲ್ಲಿ 24 ವರ್ಷಗಳ ಹಿಂದೆ ನಡೆದಿದ್ದ ನಕಲಿ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರು ಮೇಜರ್​ ಜನರಲ್​ ಸೇರಿ ಏಳು ಮಂದಿ ಸೇನಾ ಸಿಬ್ಬಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಗುವಾಹಟಿ: ಆಸ್ಸಾಂನಲ್ಲಿ 24 ವರ್ಷಗಳ ಹಿಂದೆ ನಡೆದಿದ್ದ ನಕಲಿ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರು ಮೇಜರ್​ ಜನರಲ್​ ಸೇರಿ ಏಳು ಮಂದಿ ಸೇನಾ ಸಿಬ್ಬಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೇಜರ್​ ಜನರಲ್​ ಎ.ಕೆ.ಲಾಲ್​, ಕರ್ನಲ್​ ಥಾಮಸ್​ ಮ್ಯಾಥ್ಯೂ, ಕರ್ನಲ್​, ಆರ್​.ಎಸ್​.ಸಿಬಿರೆನ್​, ಕ್ಯಾಪ್ಟನ್​ ದಿಲೀಪ್ ಸಿಂಗ್​, ಕ್ಯಾಪ್ಟನ್​ ಜಗದೇವ್​ ಸಿಂಗ್​, ನಾಯಕ್​ ಅಲ್ಬಿಂದರ್​ ಹಾಗೂ ನಾಯಕ್​ ಶಿವೇಂದರ್​ ಅವರು ಶಿಕ್ಷೆಗೆ ಗುರಿಯಾದವರು. ಆಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ 24 ವರ್ಷಗಳ ಹಿಂದೆ ನಡೆದ ನಕಲಿ ಎನ್​ಕೌಂಟರ್​ನಲ್ಲಿ ಇವೆರೆಲ್ಲ ಆರೋಪಿಗಳೆಂದು ಗುವಾಹಟಿ ನ್ಯಾಯಾಲಯ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ದಿರ್ಬುಘರ್ ಮೂಲದ ಸೇನಾ ಘಟಕ ಮಾಹಿತಿ ನೀಡಿದೆ.

ಆಸ್ಸಾಂನ ಚಹಾ ಉದ್ಯಮಿಯ ಹತ್ಯೆಗೆ ಸಂಬಂಧಪಟ್ಟಂತೆ ಭಾರತೀಯ ಸೇನೆ ತಿನ್ಸುಕಿಯಾ ಜಿಲ್ಲೆಯ ಬೇರೆಬೇರೆ ಪ್ರದೇಶಗಳಿಂದ ಒಟ್ಟು ಒಂಭತ್ತು ಯುವಕರನ್ನು 1994ರ ಫೆಬ್ರವರಿ ಅಪಹರಿಸಿತ್ತು. ಅವರನ್ನು ಯುನೈಟೆಡ್​ ಲಿಬರೇಶನ್​ ಫ್ರಂಟ್​ ಆಫ್​ ಆಸ್ಸಾಂನ ಉಗ್ರರು ಎಂದು ಬಿಂಬಿಸಲಾಗಿತ್ತು. ಅವರಲ್ಲಿ ನಾಲ್ವರನ್ನು ಬಿಡುಗಡೆ ಮಾಡಿ ಐವರು ಯುವಕರನ್ನು ಸೇನೆ ಹತ್ಯೆ ಮಾಡಿದೆ ಎಂದು ಆಸ್ಸಾಂ ಮಾಜಿ ಸಚಿವ, ಬಿಜೆಪಿ ಮುಖಂಡ ಜಗದೀಶ್ ಭುಯನ್​ ದೂರು ನೀಡಿದ್ದಲ್ಲದೆ ಗುಹಾವಟಿ ಹೈಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದರು.

ಈ ವರ್ಷ ಜುಲೈ 16ರಿಂದ ಪ್ರಕರಣದ ವಿಚಾರಣೆ ಆರಂಭವಾಗಿ ಜು.27ರಂದು ಮುಕ್ತಾಯವಾಗಿತ್ತು. ಶಿಕ್ಷೆ ಪ್ರಮಾಣ ಕಾಯ್ದಿರಿಸಿದ್ದ ಕೋರ್ಟ್​ ಇಂದು(ಅಕ್ಟೋಬರ್ 14 ರಂದು ) ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಭುಯನ್​, ನನಗೆ ನಮ್ಮ ನ್ಯಾಯಾಂಗ ವ್ಯವಸ್ಥೆ, ಪ್ರಜಾಪ್ರಭುತ್ವ ಹಾಗೂ ಸೈನ್ಯದ ಶಿಸ್ತಿನ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.