ದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಅತಿ ವೇಗದ ರೈಲು ‘ಟ್ರೇನ್‌ 18’ ಇನ್ನು “ವಂದೇ ಭಾರತ ಎಕ್ಸ್‌ಪ್ರೆಸ್”

0
659

ದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಅತಿ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

ನವದೆಹಲಿ (ಪಿಟಿಐ): ದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಅತಿ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

‘ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವಿಶ್ವದರ್ಜೆ ರೈಲುಗಳನ್ನು ನಿರ್ಮಿಸಲು ಸಾಧ್ಯ ಎನ್ನುವುದಕ್ಕೆ ಈ ರೈಲು ಉದಾಹರಣೆ’ ಎಂದು ಗೋಯಲ್ ಹೇಳಿದ್ದಾರೆ. 

ಈ ರೈಲು ನಿರ್ಮಾಣ ಆರಂಭಿಸಿದಾಗ ‘ಟ್ರೇನ್ 18’ ಎಂದು ಹೆಸರಿಡಲಾಗಿತ್ತು. ಬಳಿಕ ಇದಕ್ಕೆ ಹೆಸರಿಡಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ ಅಂತಿಮವಾಗಿ ಈ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ನಿಗದಿಪಡಿಸಲಾಯಿತು. ಇದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಜನರಿಗೆ ನೀಡುತ್ತಿರುವ ಕೊಡುಗೆ ಎಂದು ಅವರು ಹೇಳಿದ್ದಾರೆ.

 

ದೆಹಲಿಯಿಂದ ವಾರಾಣಸಿಗೆ ಸಂಚರಿಸಲಿರುವ ಹೊಸ ಹೆಸರಿನ ರೈಲಿಗೆ ಪ್ರಧಾನಿ ಮೋದಿ ಶೀಘ್ರ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

16 ಬೋಗಿಗಳ ಈ ರೈಲನ್ನು 97 ಕೋಟಿ ವೆಚ್ಚದಲ್ಲಿ, 18 ತಿಂಗಳಲ್ಲಿ ಸಿದ್ಧಪ‍ಡಿಸಲಾಗಿದೆ. ಸಂಪೂರ್ಣವಾಗಿ ಭಾರತೀಯ ಎಂಜಿನಿಯರ್‌ಗಳೇ ಇದನ್ನು ನಿರ್ಮಿಸಿದ್ದಾರೆ.

ತಯಾರಿಕೆ ಹೆಚ್ಚಳಕ್ಕೆ ಮನವಿ

‘ತಯಾರಿಕೆ ಹೆಚ್ಚಿಸಲು ಹಾಗೂ ಈ ಮೂಲಕ ಒಟ್ಟು ವೆಚ್ಚ ಕಡಿಮೆ ಮಾಡಲು ರೈಲ್ವೆ ಮಂಡಳಿಗೆ ಕೋರಿದ್ದೇನೆ. ಒಮ್ಮೆ ಹೆಚ್ಚುವರಿ ರೈಲುಗಳ ಉತ್ಪಾದನೆಯಾದ ಬಳಿಕ ಅವುಗಳನ್ನು ರಫ್ತು ಸಹ ಮಾಡಲಾಗುತ್ತದೆ’ ಎಂದು ಗೋಯಲ್ ತಿಳಿಸಿದ್ದಾರೆ.