ದೇಶದ ಮೊದಲ 5ಜಿ ಪರೀಕ್ಷೆ ಯಶಸ್ವಿ

0
15

ದೂರ ಸಂಪರ್ಕ ಸಂಸ್ಥೆ ಭಾರತಿ ಏರ್‌ಟೆಲ್‌ ಮತ್ತು ಚೀನಾದ ಸಂವಹನ ಸಂಪರ್ಕ ಉಪಕರಣಗಳ ತಯಾರಿಕಾ ಸಂಸ್ಥೆ ಹುವೈ ನಡೆಸಿದ 5ಜಿ ನೆಟ್‌ವರ್ಕ್ ಪರೀಕ್ಷೆ ಯಶಸ್ವಿಯಾಗಿದೆ.

ಗುರುಗ್ರಾಮದ ಮನೇಸರ್‌ನಲ್ಲಿರುವ ಏರ್‌ಟೆಲ್‌ ನೆಟ್‌ವರ್ಕ್‌ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅಂತರ್ಜಾಲ ಸಂಪರ್ಕದ ವೇಗ ಸೆಂಕೆಂಡಿಗೆ 3ಗಿಗಾಬೈಟ್‌ನಷ್ಟು ದಾಖಲಾಗಿದೆ ಎಂದು ಸಂಸ್ಥೆಗಳು ಶನಿವಾರ ತಿಳಿಸಿವೆ.

‘5ಜಿ ನೆಟ್‌ವರ್ಕ್‌ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಪ್ರಯೋಗ ಅತ್ಯಂತ ಮಹತ್ವದ್ದು. ಇದರಿಂದ ಜನರ ಜೀವನ ವಿಧಾನ, ಕೆಲಸದ ವಿಧಾನದಲ್ಲಿ ಸಾಕಷ್ಟು ಸುಧಾರಣೆಗಳು ಆಗಲಿವೆ. ಹೀಗಾಗಿ ದೇಶದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಹಭಾಗಿ ಸಂಸ್ಥೆಗಳೊಂದಿಗೆ ಶ್ರಮಿಸುತ್ತಿದ್ದೇವೆ’ ಎಂದು ಭಾರತಿ ಏರ್‌ಟೆಲ್‌ನ ನಿರ್ದೇಶಕ ಸವರ್‌ಗಾಂವಕರ್ ತಿಳಿಸಿದ್ದಾರೆ.

‘3.5 ಗಿಗಾಹರ್ಟ್ಸ್‌ ಬ್ಯಾಂಡ್‌ನಲ್ಲಿ 5ಜಿ ನೆಟ್‌ವರ್ಕ್‌ನ ಪರೀಕ್ಷೆಯನ್ನು ಭಾರತಿ ಏರ್‌ಟೆಲ್‌ ಯಶಸ್ವಿಯಾಗಿ ನಿರ್ವಹಿಸಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರರೀಕ್ಷೆಗಳನ್ನು ಮಾಡಲಿದ್ದೇವೆ’ ಎಂದು ಹುವಾಯ್‌ನ ತಂತಿರಹಿತ ಉಪಕರಣಗಳ ಮಾರುಕಟ್ಟೆ ವಿಭಾಗದ ನಿರ್ದೇಶಕ ಎಮ್ಯಾನುವೇಲ್ ಕೊಯೊಲೊ ಅಲ್ವೆಸ್‌ ಹೇಳಿದ್ದಾರೆ.

5ಜಿ ನೆಟ್‌ವರ್ಕ್‌ ಬಳಕೆಗೆ ಲಭ್ಯವಾದಲ್ಲಿ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (IoT), ಆಗ್ಯುಮೆಂಟ್‌ ರಿಯಾಲಿಟಿ, ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನಗಳ ಬಳಕೆ ಹೆಚ್ಚಾಗಲಿದೆ. ಅಂತರ್ಜಾಲ ಬಳಕೆ, ಸಾಮಾಜಿಕ ಮಾಧ್ಯಮಗಳ ಬಳಕೆ ಪ್ರಮಾಣವೂ ಹೆಚ್ಚಲಿದೆ.