ದೇಶದ ಮೊದಲ ಲೋಕಪಾಲ್ ಆಗಿ ಸುಪ್ರೀಂ ನಿವೃತ್ತ ನ್ಯಾ. ಪಿಸಿ ಘೋಷ್ ಪ್ರಮಾಣವಚನ

0
567

ಭಾರತದ ಮೊದಲ ಲೋಕಪಾಲರಾಗಿ ಆಯ್ಕೆಯಾಗಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಪಿಣಕಿ ಚಂದ್ರ ಘೋಷ್‌ ಅವರು ಪ್ರಮಾಣವಚನ ಸ್ವೀಕರಿಸಿದರು.

ನವದೆಹಲಿ: ಭಾರತದ ಮೊದಲ ಲೋಕಪಾಲರಾಗಿ ಆಯ್ಕೆಯಾಗಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಪಿಣಕಿ ಚಂದ್ರ ಘೋಷ್‌ ಅವರು ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಸಮ್ಮುಖದಲ್ಲಿ ಘೋಷ್‌ಗೆ ಪ್ರಮಾಣವಚನ ಬೋಧಿಸಲಾಯಿತು.

ಫೆಬ್ರವರಿ ಅಂತ್ಯದ ವೇಳೆಗೆ ಲೋಕಪಾಲರ ಆಯ್ಕೆಯಾಗಬೇಕು ಎಂದು ಸುಪ್ರೀಂ ತೀರ್ಪು ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್​ ಹಾಗೂ ಪ್ರತಿಷ್ಠಿತ ನ್ಯಾಯಾಧೀಶರಿದ್ದ ಲೋಕಪಾಲ ಆಯ್ಕೆ ಸಮಿತಿಯು ನಿವೃತ್ತ ನ್ಯಾಯಾಧೀಶ ಪಿ.ಸಿ.ಘೋಷ್​​ ಅವರನ್ನು ದೇಶದ ಮೊದಲ ಲೋಕಪಾಲ್​ ಆಗಿ ಆಯ್ಕೆ ಮಾಡಿತ್ತು.

ಲೋಕಪಾಲ್​ ಅಧಿಕಾರಾವಧಿ 4 ವರ್ಷ ಇರಲಿದ್ದು, ದೇಶದ ಲೋಕಪಾಲರಾಗಿ ಆಯ್ಕೆಯಾಗಿರುವ ನಿ. ನ್ಯಾಯಮೂರ್ತಿ ಘೋಷ್‌ ಅವರು ಮಾಜಿ ಸಚಿವರು ಮತ್ತು ಸಂಸದರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡುವ ಅಧಿಕಾರವನ್ನು ಹೊಂದಿದ್ದಾರೆ.

66 ವರ್ಷದ ಘೋಷ್‌ ಅವರು 2017ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತಿ ಹೊಂದಿದ್ದರು. ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC)ದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. (ಏಜೆನ್ಸೀಸ್‌)