ದೇಶದ ಟಾಪ್ 10 ಶ್ರೀಮಂತ ಬಿಲ್ಡರ್‌ಗಳಲ್ಲಿ ಬೆಂಗಳೂರಿನ ಮೂವರು

0
641

ರಾಜಧಾನಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನಂಟಿರುವ ಎಂಬೆಸಿ ಗ್ರೂಪ್‌ನ ಮಾಲೀಕ ಜಿತೇಂದ್ರ ವಿರ್ವಾನಿ ಅವರು ದೇಶದ 2ನೇ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನಂಟಿರುವ ಎಂಬೆಸಿ ಗ್ರೂಪ್‌ನ ಮಾಲೀಕ ಜಿತೇಂದ್ರ ವಿರ್ವಾನಿ ಅವರು ದೇಶದ 2ನೇ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಅಷ್ಟೇ ಅಲ್ಲದೆ, ದೇಶದ 10 ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಗಳ ಪಟ್ಟಿಯಲ್ಲಿ ಬೆಂಗಳೂರಿನ ಮೂವರು ಉದ್ಯಮಿಗಳು ಸ್ಥಾನ ಗಿಟ್ಟಿಸಿಕೊಂಡಿರುವುದು ವಿಶೇಷವಾಗಿದೆ. ನವೆಂಬರ್ 21 ರ ಬುಧವಾರ ಬಿಡುಗಡೆಯಾಗಿರುವ 2018ರ ಗ್ರೋಹೆ ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ಲಿಸ್ಟ್‌ನಲ್ಲಿ ಈ ಮಾಹಿತಿ ಲಭ್ಯವಾಗಿದೆ. 

ಲೋಧಾ ಗ್ರೂಪ್‌ನ ಮಾಲೀಕರಾಗಿರುವ ಮಹಾರಾಷ್ಟ್ರದ ಮಲಬಾರ್ ಹಿಲ್ಸ್ ಕ್ಷೇತ್ರದ ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಅವರು ಭಾರತದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 62 ವರ್ಷದ ಲೋಧಾ ಬಳಿ ಒಟ್ಟು 27,150 ಕೋಟಿ ರೂಪಾಯಿ ಸಂಪತ್ತು ಇದೆ. ಕಳೆದ ವರ್ಷ ಇವರು 18610 ಕೋಟಿ ರೂಪಾಯಿ ಸಂಪತ್ತು ಹೊಂದಿದ್ದರು. 

23,160 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಜಿತೇಂದ್ರ ವಿರ್ವಾನಿ ದೇಶದ ಎರಡನೇ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 52 ವರ್ಷದ ವಿರ್ವಾನಿ ಅವರು ಒಟ್ಟು 23,160 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಕಳೆದ ವರ್ಷ ಇವರು 16,700 ಕೋಟಿ ರೂಪಾಯಿ ಸಂಪತ್ತಿನ ಮೂಲಕ 3ನೇ ಸ್ಥಾನದಲ್ಲಿದ್ದರು. 

ಕಳೆದ ವರ್ಷ 23,460 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಪ್ರತಮ ಸ್ಥಾನದಲ್ಲಿದ್ದ ಡಿಎಲ್‌ಎಫ್ ಕಂಪೆನಿಯ ಸಂಸ್ಥಾಪಕ ರಿಯಲ್ ಎಸ್ಟೇಟ್ ಕಿಂಗ್ ಎಂದೇ ಕರೆಯಲ್ಪಡುವ ಕೆ.ಪಿ.ಸಿಂಗ್ ಅವರು ಪ್ರಸಕ್ತ ಸಾಲಿನ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಆದರೆ, ಅವರ ಸುಪುತ್ರ 17,690 ಕೋಟಿ ರೂಪಾಯಿ ಆಸ್ತಿಯೊಂದಿಗೆ ಈ ವರ್ಷ ಮೂರನೇ ಸ್ಥಾನದಲ್ಲಿದ್ದಾರೆ. 

ಬೆಂಗಳೂರು ಮೂಲದ ಆರ್‌ಎಂಝಡ್ ಮಾಲೀಕರಾದ ಮನೋಜ್ ಮೆಂಡಾ ಹಾಗೂ ರಾಜ್ ಮೆಂಡಾ ಅವರು ತಲಾ 5,900 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದುವ ಮೂಲಕ ಟಾಪ್ ಟೆನ್ ಶ್ರೀಮಂತ ರಿಯಲ್ ಎಸ್ಟೇಟ್ ಪಟ್ಟಿಯಲ್ಲಿ 9-10 ನೇ ಸ್ಥಾನ ಪಡೆದಿದ್ದಾರೆ.