ದೆಹಲಿ ಸರ್ಕಾರಕ್ಕೆ ₹25 ಕೋಟಿ ದಂಡ (ನಿಯಂತ್ರಣಕ್ಕೆ ಬಾರದ ವಾಯು ಮಾಲಿನ್ಯ ಸಮಸ್ಯೆ)

0
423

ವಾಯುಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ಬಾರದಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ), ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) ₹25 ಕೋಟಿಯನ್ನು ದಂಡದ ರೂಪದಲ್ಲಿ ಠೇವಣಿ ಇಡುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

ನವದೆಹಲಿ(ಪಿಟಿಐ): ವಾಯುಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ಬಾರದಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ), ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) 25 ಕೋಟಿಯನ್ನು ದಂಡದ ರೂಪದಲ್ಲಿ ಠೇವಣಿ ಇಡುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದೆ. 

ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಅವರ ನೇತೃತ್ವದ ಪೀಠವು, ಆಮ್‌ ಆದ್ಮಿ ಪಕ್ಷದ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ಈ ಮೊದಲೇ ಸ್ಪಷ್ಟ ನಿರ್ದೇಶನ ನೀಡಿದ್ದರೂ, ನಾಲ್ಕೂವರೆ ವರ್ಷಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. 

ಪ್ಲಾಸ್ಟಿಕ್‌, ಚರ್ಮದ ಉತ್ಪನ್ನಗಳು, ರಬ್ಬರ್ ಸುಡುವುದರಿಂದ ವಾಯುಮಾಲಿನ್ಯ ವಿಪರೀತವಾಗುತ್ತಿದೆ. ಅಲ್ಲದೆ, ಈ ವಸ್ತುಗಳನ್ನು ತಯಾರಿಸುವ ಅನಧಿಕೃತ ಕೈಗಾರಿಕಾ ಘಟಕಗಳು ಮುಂದ್ಕ ಮತ್ತು ನೀಲ್‌ವಲ್‌ ಗ್ರಾಮದ ಕೃಷಿ ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಗ್ರಾಮದ ನಿವಾಸಿಗಳಾದ ಸತೀಶ್‌ಕುಮಾರ್ ಮತ್ತು ಮಹಾವೀರ್‌ ಸಿಂಗ್‌ ಎಂಬುವರು ಎನ್‌ಜಿಟಿ ಮೊರೆ ಹೋಗಿದ್ದರು. 

ಎನ್‌ಜಿಟಿಯು ಈ ಬಗ್ಗೆ, ದೆಹಲಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳು, ಪೊಲೀಸರು ಮತ್ತು ಇತರೆ ಅಧಿಕಾರಿಗಳನ್ನು ಈ ತಪ್ಪಿಗೆ ಹೊಣೆ ಮಾಡಿ ಕ್ರಮ ಕೈಗೊಳ್ಳುವಂತೆ ಹೇಳಿತ್ತು. 

ಹದಗೆಟ್ಟ ವಾಯು

ದೆಹಲಿಯ ವಾಯುಗುಣಮಟ್ಟ 2018 ಡಿಸೆಂಬರ್ 3 ರ ಸೋಮವಾರ ತೀರಾ ಹದಗೆಟ್ಟಿದ್ದು, ವಾಯು ಗುಣಮಟ್ಟ ಸೂಚ್ಯಂಕದಲ್ಲಿ (ಎಕ್ಯುಐ) ‘ಅತಿ ಕಳಪೆ’ ವಿಭಾಗಕ್ಕೆ ಕುಸಿದಿದೆ ಎಂದು ಸಿಪಿಸಿಬಿ ಹೇಳಿದೆ.  ಎಕ್ಯುಐ ಪ್ರಕಾರ, 0–50 ಅಂಶಗಳಿದ್ದರೆ ವಾಯು ಗುಣಮಟ್ಟವು ‘ಉತ್ತಮ’, 51ರಿಂದ 100 ಇದ್ದರೆ ‘ತೃಪ್ತಿದಾಯಕ’, 101ರಿಂದ 200 ‘ಸುಧಾರಣಾ ಮಟ್ಟ, 201ರಿಂದ 300 ‘ಕಳಪೆ’ ಹಾಗೂ 301ರಿಂದ 400 ಅಂಶಗಳಿಷ್ಟದ್ದರೆ, ‘ಅತಿ ಕಳಪೆ’ ಎಂದು ಪರಿಗಣಿಸಲಾಗುತ್ತದೆ. ಸೋಮವಾರ ದೆಹಲಿಯ ವಾಯುಗುಣಮಟ್ಟ 337 ಅಂಶಗಳಷ್ಟಿತ್ತು.