ದೆಹಲಿಯಲ್ಲಿ ಶುದ್ಧ ಆಮ್ಲಜನಕಕ್ಕೆ ‘ಆಕ್ಸಿಜನ್ ಬಾರ್’

0
31

ಅಪಾಯಕಾರಿ ಮಟ್ಟದಲ್ಲಿರುವ ವಾಯುಮಾಲಿನ್ಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ದೆಹಲಿಯ ಕೆಲವು ನಿವಾಸಿಗಳು ‘ಆಕ್ಸಿಜನ್ ಬಾರ್‌’ ಮೊರೆ ಹೋಗಿದ್ದಾರೆ. ಕೆಲವು ನಿಮಿಷಕ್ಕೆ ಇಂತಿಷ್ಟು ಎಂದು ಹಣ ಪಾವತಿ ಮಾಡಿ ಶುದ್ಧ ಆಮ್ಲಜನಕ ಉಸಿರಾಟಕ್ಕೆ ಅವಕಾಶ ಕೊಡುವ ‘ಆಕ್ಸಿಜನ್ ಬಾರ್’ ದೆಹಲಿಯಲ್ಲಿ ಜನಪ್ರಿಯತೆ ಪಡೆಯುತ್ತಿದೆ.

ನವದೆಹಲಿ: ಅಪಾಯಕಾರಿ ಮಟ್ಟದಲ್ಲಿರುವ ವಾಯುಮಾಲಿನ್ಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ದೆಹಲಿಯ ಕೆಲವು ನಿವಾಸಿಗಳು ‘ಆಕ್ಸಿಜನ್ ಬಾರ್‌’ ಮೊರೆ ಹೋಗಿದ್ದಾರೆ. ಕೆಲವು ನಿಮಿಷಕ್ಕೆ ಇಂತಿಷ್ಟು ಎಂದು ಹಣ ಪಾವತಿ ಮಾಡಿ ಶುದ್ಧ ಆಮ್ಲಜನಕ ಉಸಿರಾಟಕ್ಕೆ ಅವಕಾಶ ಕೊಡುವ ‘ಆಕ್ಸಿಜನ್ ಬಾರ್’ ದೆಹಲಿಯಲ್ಲಿ ಜನಪ್ರಿಯತೆ ಪಡೆಯುತ್ತಿದೆ.

‘ಆಕ್ಸಿ ಪ್ಯೂರ್’ ಹೆಸರಿನ ಇಂಥದ್ದೊಂದು ಆಮ್ಲಜನಕದ ಬಾರ್ ದೆಹಲಿಯ ಸೆಲೆಕ್ಟ್‌ ಸಿಟಿ ಮಾಲ್‌ನಲ್ಲಿ ಆರಂಭವಾಗಿದೆ. ಇಲ್ಲಿ ವಿವಿಧ ಫ್ಲೇವರ್‌ಗಳ ಆಮ್ಲಜನಕವನ್ನು ಉಸಿರಾಡಲು ಜನರು ಸರದಿಯಲ್ಲಿ ನಿಂತಿರುತ್ತಾರೆ.

‘ಈ ಬಾರ್‌ನಿಂದ ನನಗೆ ಆರ್ಥಿಕವಾಗಿ ಲಾಭವೇನೂ ಆಗುತ್ತಿಲ್ಲ. ಆದರೂ ನಗರದ ಇತರ ಭಾಗಗಳಲ್ಲೂ ಇಂತಹ ಬಾರ್‌ಗಳನ್ನು ಆರಂಭಿಸುವ ಯೋಚನೆ ಇದೆ. ಮುಂಬೈ ಮತ್ತು ಬೆಂಗಳೂರಿನಲ್ಲೂ ಇವನ್ನು ಆರಂಭಿಸುತ್ತೇನೆ’ ಎನ್ನುತ್ತಾರೆ ಆಕ್ಸಿ ಪ್ಯೂರ್ ಮಾಲೀಕ ಆರ್ಯವೀರ್ ಕುಮಾರ್.

ಶುದ್ಧ ಆಮ್ಲಜನಕದ ಉಸಿರಾಟದ ಬಗ್ಗೆ ಗ್ರಾಹಕರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಕೇವಲ 15 ನಿಮಿಷ ಶುದ್ಧ ಆಮ್ಲಜನಕ ಉಸಿರಾಡುವುದರಿಂದ ಆರೋಗ್ಯಕ್ಕೆ ಎಷ್ಟು ಉಪಯೋಗವಾಗುತ್ತದೆಯೋ ಗೊತ್ತಿಲ್ಲ. ಆದರೆ, ನನಗೆ ಸ್ವಲ್ಪ ಆರಾಮ ಎನಿಸುತ್ತಿದೆ’ ಎಂದು ಲಿಸಾ ದ್ವಿವೇದಿ ಎಂಬುವವರು ಹೇಳಿದ್ದಾರೆ.

‘ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿದೆ. ಕೆಲವು ದಿನಗಳಿಂದ ನನಗೆ ಕಣ್ಣಿನಲ್ಲಿ ನವೆಯಾಗುತ್ತಿದೆ. ಗಂಟಿನಲ್ಲಿ ಉರಿಯೂತವಿದೆ. ಹೇಗಾದರೂ ಈ ಸಮಸ್ಯೆಯಿಂದ ಬಿಡುಗಡೆ ಬೇಕಿದೆ’ ಎಂದು ಲಿಸಾ ಹೇಳಿದ್ದಾರೆ.

15 ನಿಮಿಷ ಶುದ್ಧ ಆಮ್ಲಜನಕ ಉಸಿರಾಡಲು 299 ಶುಲ್ಕ ವಿಧಿಸಲಾಗುತ್ತಿದೆ.