ದೂರಸಂಪರ್ಕ ಕರಡು ನೀತಿ ಪ್ರಕಟ : 40 ಲಕ್ಷ ಉದ್ಯೋಗ ಸೃಷ್ಟಿ, ವೇಗದ ಬ್ರಾಡ್‌ಬ್ಯಾಂಡ್‌

0
19

2022ರ ವೇಳೆಗೆ ಎಲ್ಲರಿಗೂ 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ, ‘5ಜಿ’ ಸೌಲಭ್ಯ ಮತ್ತು 40 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಹೊಸ ದೂರ ಸಂಪರ್ಕ ಕರಡು ನೀತಿಯಲ್ಲಿ ಗುರಿ ನಿಗದಿಪಡಿಸಲಾಗಿದೆ.

ನವದೆಹಲಿ: 2022ರ ವೇಳೆಗೆ ಎಲ್ಲರಿಗೂ 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ, ‘5ಜಿ’ ಸೌಲಭ್ಯ ಮತ್ತು 40 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಹೊಸ ದೂರ ಸಂಪರ್ಕ ಕರಡು ನೀತಿಯಲ್ಲಿ ಗುರಿ ನಿಗದಿಪಡಿಸಲಾಗಿದೆ.

7.8 ಲಕ್ಷ ಕೋಟಿಗಳಷ್ಟು ಸಾಲದ ಸುಳಿಗೆ ಸಿಲುಕಿರುವ ದೂರಸಂಪರ್ಕ ಕ್ಷೇತ್ರದ ಪುನಶ್ಚೇತನ ಉದ್ದೇಶದ, ‘ರಾಷ್ಟ್ರೀಯ ಡಿಜಿಟಲ್‌ ಸಂವಹನ ನೀತಿ 2018’ಯನ್ನು ಕೇಂದ್ರ ಸರ್ಕಾರವು ಅನಾವರಣಗೊಳಿಸಿದೆ.

ವ್ಯಾಪಕ ಸುಧಾರಣಾ ಕ್ರಮಗಳ ಮೂಲಕ 6.50 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ.

ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ವಲಯದ ಕೊಡುಗೆಯನ್ನು ಶೇ 6 ರಿಂದ ಶೇ 8ಕ್ಕೆ ಹೆಚ್ಚಿಸುವ ಮೂಲಕ ಡಿಜಿಟಲ್‌ ಕಮ್ಯುನಿಕೇಷನ್ಸ್‌ ವಲಯದಲ್ಲಿ 40 ಲಕ್ಷದಷ್ಟು ಹೆಚ್ಚುವರಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ನಿಶ್ಚಯಿಸಲಾಗಿದೆ. ಹೊಸ ನೀತಿಯಡಿ, ದೇಶದಲ್ಲಿನ ಶೇ 50ರಷ್ಟು ಮನೆಗಳಿಗೆ ಸ್ಥಿರ ದೂರವಾಣಿ ಮೂಲಕ ಬ್ರಾಡ್‌ಬ್ಯಾಂಡ್‌ ಸೇವೆ ಮತ್ತು ಸ್ಥಿರ ದೂರವಾಣಿ ಪೋರ್ಟೆಬಿಲಿಟಿ ಸೌಲಭ್ಯ ಕಲ್ಪಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಪ್ರತಿಯೊಬ್ಬರಿಗೂ 50 ಎಂಬಿಪಿಎಸ್‌ ಬ್ರಾಡ್‌ಬ್ಯಾಂಡ್‌ ಸೌಲಭ್ಯ, ಎಲ್ಲ ಗ್ರಾಮ ಪಂಚಾಯ್ತಿಗಳಿಗೆ 2020ರ ವೇಳೆಗೆ ಪ್ರತಿ ಸೆಕೆಂಡ್‌ಗೆ 1 ಜಿಬಿಪಿಎಸ್‌ ಸಂಪರ್ಕ ಸೌಲಭ್ಯ, 2022ರ ವೇಳೆಗೆ ಇದನ್ನು 10 ಜಿಬಿಪಿಎಸ್‌ಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.

ಡಿಜಿಟಲ್‌ ಸಂಪರ್ಕ ವ್ಯವಸ್ಥೆಯು ಕೈಗೆಟುಕುವ ಬೆಲೆಗೆ ದೊರೆಯಲು ತರಂಗಾಂತರಗಳನ್ನು ಕಡಿಮೆ ಬೆಲೆಗೆ ಒದಗಿಸುವ ನೀತಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಬಂಡವಾಳ ಹೂಡಿಕೆ, ಸಂಶೋಧನೆಗಳಿಗೆ ಅಡಚಣೆ ಒಡ್ಡಿರುವ ಮತ್ತು ಗ್ರಾಹಕರ ಹಿತಾಸಕ್ತಿಗೆ ಪೂರಕವಲ್ಲದ ನಿಯಂತ್ರಣ ಕ್ರಮಗಳನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ಡಿಜಿಟಲ್‌ ಸಂಪರ್ಕದ ಸಾಧನ, ಮೂಲಸೌಕರ್ಯ ಮತ್ತು ಸೇವೆಗಳ ಮೇಲಿನ ತೆರಿಗೆಗಳನ್ನು ಸರಳೀಕರಣಗೊಳಿಸಲು ನಿರ್ಧರಿಸಲಾಗಿದೆ.

ಈ ವಲಯ ಎದುರಿಸುತ್ತಿರುವ ಲೈಸನ್ಸ್‌ ಶುಲ್ಕ, ತರಂಗಾಂತರ ಬಳಕೆ ಶುಲ್ಕ ಮತ್ತು ದೂರಸಂಪರ್ಕ ಸೇವಾ ವೆಚ್ಚ ಹೆಚ್ಚಿಸುವ ಇತರ ಶುಲ್ಕಗಳ ಸಮಸ್ಯೆಗಳನ್ನೂ ಬಗೆಹರಿಸಲು ಉದ್ದೇಶಿಸಲಾಗಿದೆ.

ದೂರ ಸಂಪರ್ಕ ಕ್ಷೇತ್ರದ ಪುನಶ್ಚೇತನ

 6.50 ಲಕ್ಷ ಕೋಟಿ ಬಂಡವಾಳ ಹೂಡಿಕೆ ಗುರಿ

ಸ್ಥಿರ ದೂರವಾಣಿ ಪೋರ್ಟೆಬಿಲಿಟಿ